ತೋಟಗಾರಿಕೆ ಇಲಾಖೆ ಗೇಟ್ ಮುರಿದು ಕಚೇರಿಗೆ ನುಗ್ಗಿದ ರೈತರು; ಮಹಿಳೆ ಅಸ್ವಸ್ಥ

Update: 2021-06-22 15:09 GMT

ಬಳ್ಳಾರಿ, ಜೂ.22: ಬಳ್ಳಾರಿ ಜಿಲ್ಲೆಯಲ್ಲಿ ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ ಮುಂದುವರಿದಿದ್ದು, ಅಧಿಕಾರಿಗಳು ಬೆಳಗ್ಗೆ 11 ಗಂಟೆಯಾದರೂ ಬಾರದ ಹಿನ್ನೆಲೆ ರೈತರು ನಗರದ ತೋಟಗಾರಿಕೆ ಕಚೇರಿ ಮುಂದಿನ ಗೇಟ್ ಬೀಗ ಮುರಿದು ಒಳನುಗ್ಗಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ರೈತ ಮಹಿಳೆ ಅಸ್ವಸ್ಥಗೊಂಡ ಘಟನೆ ನಡೆಯಿತು.

ಬಳ್ಳಾರಿ ನಗರದ ತೋಟಗಾರಿಕೆ ಕಚೇರಿಗೆ ಅಧಿಕಾರಿಗಳು ಬರುವುದಕ್ಕೂ ಮುನ್ನವೇ ನೂರಾರು ಸಂಖ್ಯೆಯಲ್ಲಿ ರೈತರು ಸೇರಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಮೆಣಸಿನಕಾಯಿ ಬಿತ್ತನೆ ಬೀಜ ಖಾಲಿಯಾಗಿದ್ದು, ದಯವಿಟ್ಟು ಎಲ್ಲರೂ ಹೋಗಿ ಎಂದು ಮನವಿ ಮಾಡಿದರು. ಆದರೆ, ರೈತರು ಜಾಗ ಬಿಟ್ಟು ಕದಲಲಿಲ್ಲ. ಈ ವೇಳೆ ನೂಕುನುಗ್ಗಲು ಉಂಟಾಗಿ ರೈತ ಮಹಿಳೆ ಅಸ್ವಸ್ಥಗೊಂಡರು. ಸ್ವಲ್ಪ ಹೊತ್ತಿನ ಬಳಿಕ ಅವರು ಚೇತರಿಸಿಕೊಂಡರು.

ಕಳೆದ ವಾರ ಸಿಜೆಂಟಾ ಕಂಪೆನಿಯ ಮೆಣಸಿನಕಾಯಿಯ 120 ಕೆಜಿ ಬೀಜವನ್ನು ವಿತರಣೆ ಮಾಡಿದ ಅಧಿಕಾರಿಗಳು ಸ್ಟಾಕ್ ಬಂದ ಮೇಲೆ ಇನ್ನುಳಿದ ಬೀಜ ವಿತರಣೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಅಧಿಕಾರಿಗಳು ಜೂ.21 ರಂದು ಮತ್ತೆ ಮೆಣಸಿನಕಾಯಿ ಬೀಜ ವಿತರಣೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಇವತ್ತು ಮತ್ತೆ ಬೀಜ ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತ ಯರ್ರಿಸ್ವಾಮಿ ತಿಳಿಸಿದ್ದಾರೆ.

ಮೆಣಸಿನಕಾಯಿ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ, ಸಿಜೆಂಟಾ ಕಂಪೆನಿ ವಿತರಣೆ ಮಾಡುವ ಈ ಬೀಜ ರೈತರಿಗೆ ಸಾಕಾಗುವುದಿಲ್ಲ. ಹೀಗಾಗಿ ರೈತರು ಬೇರೆ ತಳಿಯ ಮೆಣಸಿನಕಾಯಿ ಬೀಜಗಳನ್ನು ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಶರಣಪ್ಪ ಭೋಗಿ ತಿಳಿಸಿದ್ದಾರೆ.

ಸಿಜೆಂಟಾ ಕಂಪೆನಿ ಈಗಾಗಲೇ ಡೀಲರ್ ಗಳಿಗೆ ಮೆಣಸಿನಕಾಯಿ ಬೀಜ ಮಾರಾಟ ಮಾಡಿದ್ದರಿಂದ ಬೀಜದ ಅಭಾವ ಸೃಷ್ಟಿಯಾಗಲು ಕಾರಣವಾಗಿದೆ. ಇನ್ನು ಈ ವರ್ಷ ಹೆಚ್ಚಿನ ಪ್ರಮಾಣದ ರೈತರು ಮೆಣಸಿನಕಾಯಿ ಬೆಳೆಯಲು ಮುಂದಾಗಿದ್ದರಿಂದಾಗಿ ಸಿಜೆಂಟಾ ಕಂಪೆನಿಯ ಮೆಣಸಿನಕಾಯಿ ಬೀಜಕ್ಕೆ ಭಾರೀ ಬೇಡಿಕೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News