ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ಯುವತಿ ತಂದೆಯ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2021-06-22 16:22 GMT

ಬೆಂಗಳೂರು, ಜೂ.22: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‍ಪಿಸಿ ಸೆಕ್ಷನ್ 164ರ ಅಡಿ ನಿಯಮಬಾಹಿರವಾಗಿ ತಮ್ಮ ಪುತ್ರಿಯ ಹೇಳಿಕೆ ದಾಖಲಿಸಿದ್ದಾರೆಂದು ಆಕ್ಷೇಪಿಸಿ ಯುವತಿಯ ತಂದೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಉಪಸ್ಥಿತಿಯಲ್ಲಿ ನಿಯಮ ಬಾಹಿರವಾಗಿ ಸೆಕ್ಷನ್ 164 ಹೇಳಿಕೆ ದಾಖಲಿಸಿದ ಆರೋಪ ಮಾಡಿದ್ದ ಯುವತಿಯ ತಂದೆ, ಮಗಳ ಹೇಳಿಕೆ ರದ್ದು ಕೋರಿ ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು.

ಯುವತಿಯ ಪರ ವಾದಿಸಿದ ವಕೀಲ ಸಂಕೇತ್ ಏಣಗಿ, ಸಿಆರ್‍ಪಿಸಿ ಸೆಕ್ಷನ್ 164 ಅಡಿ ಹೇಳಿಕೆ ಕಾನೂನುಬದ್ಧವಾಗಿದೆ. ಯುವತಿ ವಯಸ್ಕಳಾಗಿದ್ದು, ಸ್ವ ಇಚ್ಛೆಯಿಂದ ಹೇಳಿಕೆ ನೀಡಿದ್ದಾಳೆ. ಸುಪ್ರೀಂಕೋರ್ಟ್ ನಿರ್ಭಯಾ ಪ್ರಕರಣದಲ್ಲಿ ನೀಡಿದ್ದ ತೀರ್ಪಿಗೆ ಅನುಗುಣವಾಗಿ ಹೇಳಿಕೆ ದಾಖಲಾಗಿದೆ. ಹೀಗಾಗಿ ಯುವತಿಯ ತಂದೆಯ ಅರ್ಜಿಯಲ್ಲಿ ಹುರುಳಿಲ್ಲವೆಂದು ಎಂದು ಪೀಠಕ್ಕೆ ತಿಳಿಸಿದರು.

ಎಸ್‍ಐಟಿ ಪರ ವಾದಿಸಿದ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್, ಯುವತಿ ಈಗಾಗಲೇ ಹೇಬಿಯಸ್ ಕಾರ್ಪಸ್ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ನೀಡಿದ್ದಾಳೆ. ಪ್ರಕರಣದಲ್ಲಿ 3ನೆ ವ್ಯಕ್ತಿಯಾಗಿರುವ ಯುವತಿಯ ತಂದೆ ಅರ್ಜಿ ಪರಿಗಣಿಸಬಾರದು. ಈ ಹಂತದಲ್ಲಿ ಯುವತಿಯ ತಂದೆಯ ಅರ್ಜಿ ಆಧರಿಸಿ ಸಿಆರ್ ಪಿಸಿ ಸೆಕ್ಷನ್ 164 ಹೇಳಿಕೆಯ ಕಾನೂನುಬದ್ಧತೆ ನ್ಯಾಯಾಲಯ ನಿರ್ಧರಿಸಲಾಗದು ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ಯುವತಿಯ ತಂದೆಯ ಅರ್ಜಿ ವಜಾಗೊಳಿಸಿ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News