ಅಪರಾಧ ಕೇಸ್‍ಗಳಲ್ಲಿ ಮೇಲ್ಮನವಿ ಸಲ್ಲಿಕೆಗೆ ವಿಳಂಬ: ಮಾರ್ಗಸೂಚಿ ರೂಪಿಸಲು ಹೈಕೋರ್ಟ್ ಆದೇಶ

Update: 2021-06-22 17:06 GMT

ಬೆಂಗಳೂರು, ಜೂ.22: ಅಪರಾಧ ಕೇಸ್‍ಗಳಲ್ಲಿ ಖುಲಾಸೆಯಾಗುವ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಕೆಯಾಗುವ ವಿಳಂಬ ತಪ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಅಭಿಯೋಜನಾ ಇಲಾಖೆ ನಿರ್ದೇಶಕರಿಗೆ ಹೈಕೋರ್ಟ್ ಆದೇಶ ನೀಡಿದೆ.

ಪರಿಶಿಷ್ಟರ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಂಘ, ವಕೀಲ ಎಸ್.ಉಮಾಪತಿ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ಮನವಿ ಆಲಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.

ಪ್ರಸ್ತುತ ಅಭಿಯೋಜನಾ ಇಲಾಖೆಯಲ್ಲಿ ಅಭಿಯೋಜಕರು ಪ್ರಮಾಣೀಕೃತ ದಾಖಲೆಗಳಿಲ್ಲದೇ ಮೇಲ್ಮನವಿ ಸಲ್ಲಿಸಲು ಅಭಿಪ್ರಾಯಗಳನ್ನು ನೀಡುತ್ತಿಲ್ಲ. ಇದು ದಶಕದ ಹಿಂದಿನ ಪದ್ಧತಿಯಾಗಿದೆ. ಇದರಿಂದಾಗಿ ಮೇಲ್ಮನವಿ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದ್ದು, ಇದನ್ನು ಸರಿಪಡಿಸುವ ತುರ್ತು ಅಗತ್ಯವಿದೆ. ಅಲ್ಲದೆ ತೀರ್ಪಿನ ಸಾಮಾನ್ಯ ಪ್ರತಿ ಡಿಪೋಜೀಷನ್ ಮತ್ತಿತರ ದಾಖಲೆಗಳನ್ನು ಆಧರಿಸಿ ಮೇಲ್ಮನವಿ ಸಲ್ಲಿಕೆಗೆ ಅಭಿಪ್ರಾಯ ನೀಡಬಹುದು. ತೀರ ಅಗತ್ಯವಿದ್ದ ಪ್ರಕರಣಗಳಲ್ಲಿ ಮಾತ್ರ ಸರ್ಟಿಫೈಡ್ ಪ್ರತಿಗಳಿಗಾಗಿ ಕಾಯಬಹುದು ಎಂದು ನ್ಯಾಯಾಲಯ ಆದೇಶಿಸಿತು. ಅಲ್ಲದೇ ಈವರೆಗೆ ಎಷ್ಟು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂಬ ವಿವರಗಳನ್ನು ನೀಡುವಂತೆ ನಿರ್ದೇಶಿಸಿತು.

ಅಲ್ಲದೆ ಖುಲಾಸೆಗೊಂಡಿರುವ ಪ್ರಕರಣಗಳ ಮೇಲ್ವಿಚಾರಣೆ ಮತ್ತು ನಿಗಾವಹಿಸಲು ರಾಜ್ಯ, ಜಿಲ್ಲಾ ಹಾಗೂ ವಿಭಾಗೀಯ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳು 2020ರ ನವೆಂಬರ್ ನಂತರ ಎಷ್ಟು ಸಭೆಗಳನ್ನು ನಡೆಸಿವೆ ಎಂಬ ಕುರಿತು ವಿವರಗಳನ್ನು ನೀಡಬೇಕು. ಹಿಂದಿನ ನಿರ್ದೇಶನದಂತೆ ವರ್ಷಕ್ಕೆ ಕನಿಷ್ಠ ಎರಡು ಸಭೆಗಳನ್ನಾದರೂ ನಡೆಸಬೇಕು ಎಂದು ಪೀಠ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News