ಚಿಕ್ಕಮಗಳೂರು: ಸಮಗ್ರ ಪರಿಹಾರ ಪ್ಯಾಕೇಜ್‍ಗೆ ಆಗ್ರಹಿಸಿ ಜನಾಗ್ರಹ ಆಂದೋಲನ ಧರಣಿ

Update: 2021-06-22 17:20 GMT

ಚಿಕ್ಕಮಗಳೂರು, ಜೂ.22: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೈದ್ಯಕೀಯ ಸೌಲಭ್ಯಗಳನ್ನು ಬಲಪಡಿಸಬೇಕು. ದೇಶದ ಪ್ರತೀ ನಾಗರಿಕನಿಗೂ ಉಚಿತ ವ್ಯಾಕ್ಸಿನ್ ನೀಡಬೇಕು. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ತುತ್ತಾದ ಎಲ್ಲ ಬಡ ಕುಟುಂಬಗಳಿಗೂ ಸಮಗ್ರ ಪಡಿತರ ವಿತರಿಸಿ ಎಲ್ಲ ಬಡ ಕುಟುಂಬಗಳಿಗೆ ಮಾಸಿಕ 5 ಸಾವಿರ ರೂ. ಪರಿಹಾರ ಧನ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿ ವಿವಿಧ ರಾಜಕೀಯ ಪಕ್ಷ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಗಳವಾರ ನಗರದಲ್ಲಿ ಜನಾಗ್ರಹ ಆಂದೋಲನ ಚಳವಳಿ ನಡೆಸಿದರು.

ನಗರದ ಗಾಂಧಿ ಪಾರ್ಕ್‍ನಲ್ಲಿ ಸಮಾವೇಶಗೊಂಡ ವಿವಿಧ ಸಂಘಟನೆ, ರಾಜಕೀಯ ಪಕ್ಷಗಳ ಮುಖಂಡರು, ರಾಜ್ಯ ಹಾಗೂ ಕೇಂದ್ರ ಸರಕಾರ ಕೊರೋನ ಸೋಂಕು ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಸರಕಾರದ ನಿರ್ಲಕ್ಷ್ಯದ ಪರಿಣಾಮ ದೇಶಾದ್ಯಂತ ಲಕ್ಷಾಂತರ ಜನರು ಸಮರ್ಪಕ ವೈದ್ಯಕೀಯ ಸೌಲಭ್ಯಗಳು ಸಿಗದೇ ಬೀದಿ ಬೀದಿಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಆಸ್ಪತ್ರೆಗಳಿಗೆ ಸಕಾಲದಲ್ಲಿ ಆಕ್ಸಿಜನ್ ಸಿಗದೇ ಅಮಾಯಕ ಬಡ ಜನರು ಸಾವಿಗೀಡಾಗಿದ್ದಾರೆ. ಪೂರ್ವ ಸಿದ್ಧತೆ ಇಲ್ಲದ ಲಾಕ್‍ಡೌನ್‍ನಿಂದಾಗಿ ಹಸಿವಿನಿಂದ ಜನರು ಸಾವಿಗೀಡಾಗಿದ್ದಾರೆ. ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸಾವಿರಾರು ಕುಟುಂಬಗಳು ಅನಾಥವಾಗಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸೋಂಕಿತರು ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ ಪಾವತಿಗೆ ಸಾಲ ಮಾಡಿ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಆಡಳಿತ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ಲಾಕ್‍ಡೌನ್‍ನಿಂದಾಗಿ ರಾಜ್ಯಾದ್ಯಂತ ಸಾರ್ವಜನಿಕರು, ರೈತರು ಬಸವಳಿದು ಹೋಗಿದ್ದಾರೆ. ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸಂಕಷ್ಟದ ಜೀವನಕ್ಕೆ ಹೆದರಿ ಅನೇಕ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 2 ತಿಂಗಳ ಅವಧಿಯ ಲಾಕ್‍ಡೌನ್‍ನಿಂದಾಗಿ ಉದ್ಯೋಗವಿಲ್ಲದೇ, ಹಣವಿಲ್ಲದೇ ಜನರ ಬದುಕು ಬೀದಿಗೆ ಬಂದಿದ್ದರೆ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ, ಮಾರುಕಟ್ಟೆ ಲಭ್ಯವಾಗದೇ ರೈತರು ಬೆಳೆದ ಬೆಳೆಗಳು ಮಣ್ಣು ಪಾಲಾಗಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ತುತ್ತಾದ ಜನರಿಗೆ ಸರಕಾರ ಸೂಕ್ತ ಪರಿಹಾರ ನೀಡದೇ ಬಿಡಿಗಾಸಿನ ಪರಿಹಾರ ನೀಡಿದೆ. ಆದರೆ ಸರಕಾರ ಘೋಷಣೆ ಮಾಡಿರುವ ಪರಿಹಾರದ ಧನ ಇದುವರೆಗೂ ಫಲಾನುಭವಿಗಳಿಗೆ ಸಿಕ್ಕಿಲ್ಲ. ಈ ಸಂಬಂಧ ಮೂರು ಬಾರಿ ಜನಾಗ್ರಹ ಆಂದೋಲನದ ಮೂಲಕ ರಾಜ್ಯ, ಕೇಂದ್ರ ಸರಕಾರಗಳಿಗೆ ಪತ್ರ ಬರೆದು ಆಕ್ಸಿಜನ್ ಬೆಡ್‍ಗಳ ಸಂಖ್ಯೆಯ ಹೆಚ್ಚಳ, ಎಲ್ಲರಿಗೂ ತುರ್ತು ಉಚಿತ ವ್ಯಾಕ್ಸಿನ್, ಎಲ್ಲರಿಗೂ ಸಮಗ್ರ ಪಡಿತರ, ಮಾಸಿಕ ನೆರವು ಧನ ಹಾಗೂ ಸೋಂಕಿನಿಂದ ಮಡಿದವರಿಗೆ ಪರಿಹಾರ ಕ್ರಮಗಳಿಗಾಗಿ ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರಕಾರ ಒಂದಷ್ಟು ಪರಿಹಾರ ಕ್ರಮ, ಪ್ಯಾಕೇಜ್ ಘೋಷಿಸಿ ಕ್ರಮಗಳನ್ನು ಕೈಗೊಂಡಿತ್ತಾದರೂ ಈ ಕ್ರಮಗಳಿಂದಾಗಿ ಸಂಕಷ್ಟಕ್ಕೆ ತುತ್ತಾದವರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ರಾಜ್ಯ ಸರಕಾರ ಇತ್ತೀಚೆಗೆ ಎರಡನೇ ಪ್ಯಾಕೆಜ್ ಘೋಷಣೆ ಮಾಡಿದ್ದರೂ ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. 3.6 ಕೋಟಿ ಜನಸಂಖ್ಯೆ ಇರುವ ಕೇರಳ ಸರಕಾರ ಅಲ್ಲಿನ ಜನರಿಗಾಗಿ 20 ಸಾವಿರ ಕೋ. ರೂ. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ನಮ್ಮ ರಾಜ್ಯದಲ್ಲಿ 6.2 ಕೋಟಿ ಜನಸಂಖ್ಯೆ ಇದ್ದು, ಕೇವಲ 2 ಸಾವಿರ ಕೋಟಿಗೂ ಕಡಿಮೆ ಮೊತ್ತದ ಪ್ಯಾಕೆಜ್ ಘೋಷಿಸಿರುವುದು ಅವೈಜ್ಞಾನಿಕವಾಗಿದೆ ಎಂದ ಅವರು, ಕೋವಿಡ್ ಸೋಂಕು ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಲೇ ಇದ್ದು, 3ನೇ ಅಲೆಯ ಭೀತಿಯೂ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಕೂಡಲೇ ಸಮಗ್ರವಾದ ವೈಜ್ಞಾನಿಕವಾದ 3ನೇ ಪರಿಹಾರ ಘೋಷಣೆ ಮಾಡಬೇಕು. ಎಲ್ಲ ಜನರಿಗೂ ಉಚಿತ ವ್ಯಾಕ್ಸಿನ್ ನೀಡಬೇಕು. ಬಡ ಕುಟುಂಬಗಳಿಗೆ ಮಾಸಿಕ 5 ಸಾವಿರ ರೂ. ನೀಡಬೇಕು. ಸಮಗ್ರ ಪಡಿತರ ಸೇರಿದಂತೆ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.

ನಂತರ ಈ ಸಂಬಂಧದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಚಳವಳಿಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜನಾಗ್ರಹ ಆಂದೋಲನದ ಸಂಚಾಲಕ ಗೌಸ್‍ ಮೊಹಿದ್ದೀನ್, ರೈತ ಸಂಘದ ದುಗ್ಗಪ್ಪಗೌಡ, ಜೆಡಿಎಸ್ ಮುಖಂಡ ಚಂದ್ರಪ್ಪ, ಕರ್ನಾಟಕ ಜನಶಕ್ತಿ ಸಂಘಟನೆಯ ರಾಮುಕೌಳಿ, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಜ್ಮತ್‍ಪಾಶ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಯೂಸುಫ್ ಹಾಜಿ, ನಸ್ರುಲ್ಲಾಖಾನ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News