ಕೋವಿಡ್‌ಗೆ ಸೆಡ್ಡು ಹೊಡೆದ ಅಲೆಮಾರಿಗಳು: ಇವರ ಆರೋಗ್ಯಕ್ಕೆ ಪ್ರಕೃತಿಯೇ ಸಂರಕ್ಷಕ

Update: 2021-06-22 17:35 GMT

ಶಿವಮೊಗ್ಗ, ಜೂ.22: ವಿಶ್ವದೆಲ್ಲೆಡೆ ಕೊರೋನ ಮರಣಮೃದಂಗ ಬಾರಿಸುತ್ತಿದೆ. ಆದರೆ, ಇಲ್ಲಿನ ಸಹ್ಯಾದ್ರಿ ಕಾಲೇಜು ಹತ್ತಿರ ರಸ್ತೆ ಬದಿ ನೆಲೆಸಿರುವ ಅಲೆಮಾರಿ ಕುಟುಂಬಗಳಿಗೆ ಕೊರೋನ ಸೋಂಕು ಸುಳಿದಿಲ್ಲ. ಇವರ ಆರೋಗ್ಯಕ್ಕೆ ಪ್ರಕೃತಿಯೇ ಸಂರಕ್ಷಕ.

ಈ ಅಲೆಮಾರಿ ಕ್ಯಾಂಪ್‌ನಲ್ಲಿ 40 ಕುಟುಂಬಗಳು ವಾಸಿಸುತ್ತಿದ್ದು, ಇವರು ಹುಟ್ಟಿನಿಂದಲೂ ವಿದ್ಯುತ್ ಕಂಡಿಲ್ಲ. 30 ವರ್ಷಗಳಿಂದಲೂ ಇಲ್ಲಿಯೇ ವಾಸಿಸುತ್ತಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕೊಳಚೆ ನೀರು, ಹಂದಿ, ನಾಯಿಗಳ ಹಾವಳಿ ಮಧ್ಯೆಯೇ ಬದುಕುತ್ತಿದ್ದಾರೆ. ಕುಡಿಯುವ ನೀರು, ವಿದ್ಯುತ್, ಬೀದಿ ದೀಪ, ವಿದ್ಯುತ್ ವ್ಯವಸ್ಥೆ ಇಲ್ಲದ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ದೇವರವನ್ನು ಹೊತ್ತುಕೊಂಡು ಬೆನ್ನಿಗೆ ಚಾಟಿಯಲ್ಲಿ ಹೊಡೆದುಕೊಂಡು ಭಿಕ್ಷೆ ಬೇಡಿ ಸಂಪಾದಿಸುತ್ತಿದ್ದ ಇವರು, ಇದೀಗ ಕುಲಕಸುಬು ಬಿಟ್ಟು ಕೂದಲು ಖರೀದಿ, ಮಿಕ್ಸಿ ರಿಪೇರಿ, ಗುಜಿರಿ ವ್ಯಾಪಾರ ಮಾಡುತ್ತಿದ್ದಾರೆ.

ಮೊದಲಿನಿಂದಲೂ ಅಲ್ಲಿ, ಇಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದ ಇವರಿಗೆ ಈಗಲೂ ಸ್ವಂತ ಊರಿಲ್ಲ, ಸೂರಿಲ್ಲ. ಇವರು ತೆಲುಗು ಬಲ್ಲವರಾಗಿದ್ದಾರೆ. 40 ವರ್ಷದ ಹಿಂದೆ ಮಹಾದೇವಿ ಟಾಕೀಸ್ ಬಳಿ ವಾಸಿಸುತ್ತಿದ್ದ ಅಲೆಮಾರಿ ಜನರನ್ನು ರೈಲ್ವೆ ಇಲಾಖೆ ಒಕ್ಕಲೆಬ್ಬಿಸಿತು. ಅವರಿಗೆ ಬೇರೆ ಕಡೆ ಭೂಮಿ ಕೊಟ್ಟರೂ ಗ್ರಾಮಸ್ಥರ ವಿರೋಧ ಹಿನ್ನೆಲೆಯಲ್ಲಿ ಸದ್ಯ ಸಹ್ಯಾದ್ರಿ ಕಾಲೇಜು ಬಳಿಯ ಖಾಲಿ ಜಾಗದಲ್ಲಿ ವಾಸವಾಗಿದ್ದಾರೆ.

ಮಕ್ಕಳು ಕೂಡ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿ, ತಂದೆ-ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕಳೆದ ವರ್ಷ ಅನುಷಾ ಎಂಬ ಬಾಲಕಿ ಮೊದಲ ಬಾರಿ ಎಸೆಸೆಲ್ಸಿ ಓದಿ ತೇರ್ಗಡೆಯಾಗಿದ್ದಾಳೆ. ಕೆಲ ಸಂಘ-ಸಂಸ್ಥೆಗಳು ಅಲೆಮಾರಿ ಜನರ ಪರ ಹೋರಾಟ ಮಾಡಿ, ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿವೆ.

ಕೊರೋನ ಮೊದಲನೇ ಅಲೆಯಲ್ಲಿ ಈ ಕ್ಯಾಂಪ್‌ನ ಓರ್ವ ಯುವಕನಿಗೆ ಕೊರೋನ ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಆತನನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಮೂರೇ ದಿನಕ್ಕೆ ಆತನನ್ನು ಮನೆಗೆ ಕಳುಹಿಸಲಾಯಿತು. ಅದನ್ನು ಹೊರತುಪಡಿಸಿದರೆ ಇದುವರೆಗೆ ಯಾರಿಗೂ ಕೊರೋನ ತಗುಲಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News