ಅರಣ್ಯ ಭೂಮಿ ಒತ್ತುವರಿ ಮಾಡಿ ಗಣಿಗಾರಿಕೆ: ಗಣಿ ಕಂಪೆನಿಗಳ ವಿರುದ್ಧ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಕೆ
ಬಳ್ಳಾರಿ, ಜೂ.23: ಆರು ವರ್ಷಗಳ ಹಿಂದೆ ಅರಣ್ಯ ಇಲಾಖೆಯಲ್ಲಿ 8 ಗಣಿ ಕಂಪೆನಿಗಳ ವಿರುದ್ಧ ದಾಖಲಾಗಿದ್ದ ಎಫ್‍ಒಸಿ(ಫಾರೆಸ್ಟ್ ಅಫೆನ್ಸ್ ಕೇಸ್)ಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಸಂಡೂರಿನ ಜೆಎಂಎಫ್‍ಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಎಂಟು ಕಂಪೆನಿಗಳ ಮಾಲಕರು, ವ್ಯವಸ್ಥಾಪಕರು ಸೇರಿ 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 8 ಕಂಪೆನಿಗಳು ತಮಗೆ ಗುತ್ತಿಗೆ ನೀಡಿರುವ ಗಣಿಗಾರಿಕೆ ಪ್ರದೇಶದ ಹೊರಗಡೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಗಣಿಗಾರಿಕೆ ಮಾಡಿರುವುದು ಇಲಾಖೆ ತನಿಖೆಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಇನ್ನುಳಿದ ಪ್ರಕರಣಗಳ ತನಿಖೆ ಪೂರ್ಣಗೊಂಡ ಮೇಲೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಅರಣ್ಯ ಇಲಾಖೆಯು ತಿಳಿಸಿದೆ. ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ ಸಮಾಜ ಪರಿವರ್ತನಾ ಸಮುದಾಯವು 2009ರಲ್ಲಿ ಸುಪ್ರೀಂಕೋರ್ಟ್ ಗೆ ಎಸ್‍ಎಲ್‍ಪಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸಿಇಸಿ ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸಿತ್ತು.
ಅರಣ್ಯ ಭೂಮಿ ಒತ್ತುವರಿ ಮಾಡಿರುವ ಕಂಪೆನಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೆ.1, 2014, ಸೆ.15, 2014ರಂದು ಸುಪ್ರೀಂಕೋರ್ಟ್ ಸೂಚನೆ ಆಧಾರದ ಮೇಲೆಯೇ ಅರಣ್ಯ ಇಲಾಖೆಯ 65 ಕಂಪೆನಿಗಳ ವಿರುದ್ಧ ಎಫ್ ಒಸಿ ಪ್ರಕರಣ ದಾಖಲಿಸಿತ್ತು.