×
Ad

ಜಾತಿವಾರು ನಿಗಮ-ಮಂಡಳಿ ಪ್ರಶ್ನಿಸಿರುವ ಪಿಐಎಲ್‍ಗಳು ರಾಜಕೀಯ ಪ್ರೇರಿತ: ಹೈಕೋರ್ಟ್ ಗೆ ಸರಕಾರ ಹೇಳಿಕೆ

Update: 2021-06-23 18:09 IST

ಬೆಂಗಳೂರು, ಜೂ.23: ಜಾತಿಗಳ ಹೆಸರಲ್ಲಿ ನಿಗಮ ಮತ್ತು ಮಂಡಳಿ ರಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ರಾಜಕೀಯ ಪ್ರೇರಿತವಾಗಿದ್ದು, ವಿಚಾರಣೆಗೆ ಪರಿಗಣಿಸುವ ಅರ್ಹತೆ ಹೊಂದಿಲ್ಲ ಎಂದು ಸರಕಾರ ಹೈಕೋರ್ಟ್‍ನಲ್ಲಿ ಪ್ರತಿಪಾದಿಸಿದೆ.

ಜಾತಿ ಹೆಸರಲ್ಲಿ ನಿಗಮ-ಮಂಡಳಿಗಳ ಸ್ಥಾಪನೆ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ರಾಜ್ಯ ಸರಕಾರದ ಪರ ವಾದಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಪಿಐಎಲ್‍ಗಳು ರಾಜಕೀಯ ಪ್ರೇರಿತವಾಗಿದ್ದು, ವಿಚಾರಣೆಗೆ ಪರಿಗಣಿಸುವ ಅರ್ಹತೆ ಹೊಂದಿಲ್ಲ. ಹೀಗಾಗಿ, ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

1976ರಿಂದ ಈವರೆಗಿನ ಸರಕಾರಗಳು ಕಾಲಕ್ಕೆ ಅನುಗುಣವಾಗಿ ಸುಮಾರು 15ಕ್ಕೂ ಹೆಚ್ಚು ನಿಗಮ ಮಂಡಳಿಗಳನ್ನು ರಚಿಸಿವೆ. ಬಹುತೇಕ ನಿಗಮ-ಮಂಡಳಿಗಳು 10-12 ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿವೆ. ಜತೆಗೆ ಸಂಬಂಧಿಸಿದ ಜಾತಿ-ಸಮುದಾಯಗಳ ಏಳಿಗೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಆದರೆ ಈವರೆಗೂ ಸುಮ್ಮನಿದ್ದ ಅರ್ಜಿದಾರರು ಇದೀಗ 2020ರಲ್ಲಿ ಆಕ್ಷೇಪ ಎತ್ತಿದ್ದಾರೆ.

ಅರ್ಜಿದಾರರು, ಸರಕಾರ ಚುನಾವಣೆಗಳನ್ನು ಗೆಲ್ಲುವ ಉದ್ದೇಶದಿಂದ ಜಾತಿ ಹೆಸರಲ್ಲಿ ನಿಗಮ-ಮಂಡಳಿಗಳ ರಚನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ, ಅರ್ಜಿದಾರರ ಆರೋಪದಲ್ಲಿ ಸತ್ಯಾಂಶವವಿಲ್ಲ. ಬಲಿಷ್ಠ ಮತ್ತು ಮುಂದುವರಿದ ಜಾತಿಗಳ ಹೆಸರಲ್ಲಿ ನಿಗಮಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳುವ ಮೂಲಕ ಜಾತಿಗಳ ನಡುವೆ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಕೆಲವೇ ಆಯ್ದ ಜಾತಿಗಳ ಹೆಸರಿನ ನಿಗಮ-ಮಂಡಳಿಗಳ ಸ್ಥಾಪನೆಯನ್ನು ಮಾತ್ರ ಪ್ರಶ್ನಿಸಿದ್ದಾರೆ. ಇಂತಹ ರಾಜಕೀಯ ಪ್ರೇರಿತ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬಾರದು.

ಎಲ್ಲ ಸಮುದಾಯಗಳ ಸವಾರ್ಂಗೀಣ ಅಭಿವೃದ್ಧಿ ಮೂಲಕ ಕಲ್ಯಾಣ ರಾಜ್ಯದ ಸ್ಥಾಪನೆ ಉದ್ದೇಶವನ್ನು ಸರಕಾರ ಹೊಂದಿದೆ. ಅದಕ್ಕಾಗಿ ವಿವಿಧ ಜಾತಿ-ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್‍ನಲ್ಲಿ ಮೀಸಲಿಡುವ ಅನುದಾನವನ್ನು ಆಯಾ ವರ್ಗಗಳಿಗೆ ತಲುಪಿಸುವ ಸೇತುವೆಗಳಾಗಿ ನಿಗಮ-ಮಂಡಳಿಗಳನ್ನು ರಚಿಸಿದೆ ಎಂದು ವಾದ ಮಂಡಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News