ಮಹಿಳಾ ನೌಕರರಿಗೆ ಸಿಹಿ ಸುದ್ದಿ: 180 ದಿನ ಶಿಶುಪಾಲನಾ ರಜೆ ಮಂಜೂರು ಮಾಡಿ ಸರಕಾರ ಆದೇಶ

Update: 2021-06-23 13:07 GMT

ಶಿವಮೊಗ್ಗ, ಜೂನ್ 22: ರಾಜ್ಯ ಸರಕಾರವು ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದಂತೆ ದೇಶದಲ್ಲಿಯೇ ಮೊದಲ ಬಾರಿಗೆ ಸರಕಾರಿ ಮಹಿಳಾ ನೌಕರರು ತಾವು ಹೊಂದಿರುವ ಕಿರಿಯ ಮಗುವಿಗೆ 18 ವರ್ಷ ಆಗುವವರೆಗೆ ಮಗುವಿನ ಆರೈಕೆಗಾಗಿ ತನ್ನ ಸೇವಾ ಅವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ (180 ದಿನಗಳು) ಶಿಶುಪಾಲನಾ ರಜೆ ಪಡೆಯಲು ಅವಕಾಶ ಕಲ್ಪಿಸಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯ ಸರಕಾರದ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಶಿಶುಪಾಲನಾ ರಜೆಯನ್ನು ಘೋಷಿಸಿದೆ. ಒಂದು ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆ ಇಲ್ಲದಂತೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಈ ಯೋಜನೆಯಡಿ ಮಹಿಳಾ ಸರಕಾರಿ ನೌಕರಳು ಈ ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ, ನಿಯಮಾನುಸಾರ ಪಡೆಯಲು ಅರ್ಹವಿರುವ ಅಸಾಧಾರಣ ರಜೆಯೂ ಒಳಗೊಂಡಂತೆ ಇತರೆ ರಜೆಯೊಂದಿಗೆ ಸಂಯೋಜಿಸಿ ಪಡೆಯಬಹುದಾಗಿದೆ. ಅಲ್ಲದೇ ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಶಿಶುಪಾಲನಾ ರಜೆಯ ಮಂಜೂರಾತಿಗಾಗಿ ಯಾವುದೇ ಪೂರಕ ದಾಖಲೆಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಸೇವಾ ಪುಸ್ತಕದಲ್ಲಿ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಿ ನೌಕರರ ಸಂಘವು ಸರಕಾರಿ ಮಹಿಳಾ ನೌಕರರಿಗೆ ಮಕ್ಕಳ ಆರೈಕೆ, ಪಾಲನೆ-ಪೋಷಣೆಗಾಗಿ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿತ್ತು. ಈ ಯೋಜನೆಯ ಅನುಷ್ಠಾನದಿಂದಾಗಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3 ಲಕ್ಷ ಸರಕಾರಿ ಮಹಿಳಾ ನೌಕರರು ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಆದೇಶ ಹೊರಡಿಸಲು ಸಹಕರಿಸಿದ ಯಡಿಯೂರಪ್ಪ ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರು ಹಾಗೂ ಸರಕಾರದ ಉನ್ನತ ಅಧಿಕಾರಿಗಳಿಗೆ ಸಮಸ್ತ ಮಹಿಳಾ ನೌಕರರ ಪರವಾಗಿ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News