×
Ad

ತಬ್ಲೀಗಿ ಜಮಾಅತ್ ವಿರುದ್ಧ ಕೋಮುದ್ವೇಷಕ್ಕೆ ಪ್ರಚೋದನೆ: NBSA ಸೂಚನೆಯಂತೆ ವಿಷಾದ ವ್ಯಕ್ತಪಡಿಸಿದ ನ್ಯೂಸ್18 ಕನ್ನಡ

Update: 2021-06-23 21:27 IST

ಕಳೆದ ವರ್ಷ ತಬ್ಲೀಗಿ ಜಮಾಅತ್ ಸದಸ್ಯರನ್ನು ಗುರಿ ಮಾಡಿ ವರದಿ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್18 ಕನ್ನಡ ಇಂದು ನೇರಪ್ರಸಾರದಲ್ಲಿ ವಿಷಾದ ವ್ಯಕ್ತಪಡಿಸಿದೆ.

ದಿಲ್ಲಿಯ ನಿಜಾಮುದ್ದೀನ್ ಮರ್ಕಝ್‍ನಲ್ಲಿ ನಡೆದ ತಬ್ಲೀಗಿ ಜಮಾಅತ್ ಕೋವಿಡ್ ಹರಡಲು ಕಾರಣವಾಗಿದೆ ಎಂದು ವರದಿ ಮಾಡಿದ್ದ ನ್ಯೂಸ್18 ಕನ್ನಡ, ಸುವರ್ಣ ನ್ಯೂಸ್ ಕನ್ನಡ ವಾಹಿನಿ ಹಾಗೂ ಆಂಗ್ಲ ಸುದ್ದಿ ವಾಹಿನಿ ಟೈಮ್ಸ್ ನೌ ಗೆ ಎನ್‍ಬಿಎಸ್‍ಎ ದಂಡ ವಿಧಿಸಿ, ನ್ಯೂಸ್18 ಕನ್ನಡ ವಾಹಿನಿಗೆ ಕ್ಷಮೆಯಾಚಿಸಲು ಸೂಚನೆ ನೀಡಿತ್ತು.

ಅದರಂತೆ ಇಂದು ವಿಷಾದ ವ್ಯಕ್ತಪಡಿಸಿದ ನ್ಯೂಸ್18 ಕನ್ನಡ ವಾಹಿನಿಯು, ''ನ್ಯೂಸ್18 ಕನ್ನಡವು 01-04-2020ರಂದು ದೇಶಕ್ಕೆ ಕೊರೋನ ವೈರಸ್ ಹಬ್ಬಿಸಿದ ದೆಹಲಿ ನಿಜಾಮುದ್ದೀನ್ ಮರ್ಕಜ್ ಹೇಗಿದೆ ಗೊತ್ತಾ?" ಮತ್ತು 01-04-2020ರಂದು "ಕರ್ನಾಟಕದಿಂದ ದೆಹಲಿಯ ಜಮಾಅತ್ ಸಭೆಗೆ ಹೋದವರ ಸಂಖ್ಯೆ ಎಷ್ಟು?" ಎಂಬ ಎರಡು ವರದಿಗಳನ್ನು ಪ್ರಸಾರ ಮಾಡಿದ್ದು, ನೀತಿ ಸಂಹಿತೆ ಮತ್ತು ಪ್ರಸಾರ ಮತ್ತು ಗುಣಮಟ್ಟದ ಪ್ರಕಾರ ಪ್ರಸಾರ ಮಾಧ್ಯಮ ಪಾಲಿಸಬೇಕಾದ ನಿಷ್ಪಕ್ಷಪಾತತೆ, ವಸ್ತುನಿಷ್ಠತೆ ಹಾಗು ತಟಸ್ಥತೆ ಕಾಪಾಡಿಕೊಳ್ಳುವುದರಲ್ಲಿ ನಾವು ನಿಯಮ ಉಲ್ಲಂಘಿಸಿದ್ದು, ಈ ಕಾರ್ಯಕ್ರಮ ಪ್ರಸಾರವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ'' ಎಂದು ತಿಳಿಸಿದೆ.

''ಜನಾಂಗೀಯ ಮತ್ತು ಧಾರ್ಮಿಕ ಸಾಮರಸ್ಯದ ಕುರಿತಾದ ವರದಿಗಾರಿಕೆಯಲ್ಲಿ ಪ್ರಸಾರ ಮಾಧ್ಯಮ ಪಾಲಿಸಬೇಕಾದ ನಿರ್ದಿಷ್ಟ ಮಾರ್ಗಸೂಚಿ ಅನುಸರಿಸುವುದರಲ್ಲೂ ನಿಯಮ ಉಲ್ಲಂಘನೆಯಾಗಿದೆ. ಯಾವುದೇ ಸಮುದಾಯವನ್ನು ಕೀಳುಮಟ್ಟದಲ್ಲಿ ಅಥವಾ ಸಮುದಾಯದಲ್ಲಿ ದ್ವೇಷ ಭಾವನೆಗಳನ್ನು ಹೆಚ್ಚಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಈ ವಿಷಯವನ್ನು ಭಾವೋದ್ರೇಕಗೊಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಬ್ರಾಡ್‌ಕಾಸ್ಟಿಂಗ್ ಮಾನದಂಡಗಳನ್ನು ಸುಧಾರಿಸುವ ಪ್ರಯತ್ನದಲ್ಲಿ NBSA ಜಾರಿಗೊಳಿಸಿದ ಕೋಡ್ ಆಫ್ ಎಥಿಕ್ಸ್ ಮತ್ತು ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಡ್ಸ್ ಮತ್ತು ಗೈಡ್‌ಲೈನ್ಸ್‌ಗಳಿಗೆ ನಾವು ಬದ್ಧರಾಗಿರುತ್ತೇವೆ'' ಎಂದು ನ್ಯೂಸ್18 ಕನ್ನಡ ತಿಳಿಸಿದೆ.

ದಿಲ್ಲಿಯಲ್ಲಿ ನಡೆದ ನಿಜಾಮುದ್ದೀನ್ ಮರ್ಕಝ್‍ನಲ್ಲಿ ನಡೆದ ತಬ್ಲೀಗಿ ಜಮಾಅತ್ ಕೋವಿಡ್ ಹರಡಲು ಕಾರಣವಾಗಿದೆ ಎಂದು ವರದಿ ಮಾಡಿದ್ದ ಚಾನೆಲ್ ಗಳ ವಿರುದ್ಧ ಕ್ಯಾಂಪೇನ್ ಅಗೇನ್ಸ್ಟ್ ಹೇಟ್ ಸ್ಪೀಚ್ ಎಂಬ ಸಂಘಟನೆ ಕಳೆದ ವರ್ಷ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಚಾನೆಲ್ ಗಳಿಗೆ ಎನ್‍ಬಿಎಸ್‍ಎ ದಂಡ ವಿಧಿಸಿ, ಕ್ಷಮೆಯಾಚಿಸಲು ಆದೇಶಿಸಿತ್ತು.

ನ್ಯೂಸ್18 ಕನ್ನಡ ವಾಹಿನಿಗೆ ರೂ. 1 ಲಕ್ಷ ದಂಡ ಹಾಗೂ ಸುವರ್ಣ ನ್ಯೂಸ್‍ಗೆ ರೂ 50,000 ದಂಡ ವಿಧಿಸಲಾಗಿದ್ದು ಈ ಮೊತ್ತವನ್ನು ಅವುಗಳು ಏಳು ದಿನಗಳೊಳಗಾಗಿ ಪಾವತಿಸಬೇಕಿದೆ ಎಂದು ತಿಳಿಸಿತ್ತು. ವಿವಿಧ ಕೋಮುಗಳ ನಡುವೆ ವೈಷಮ್ಯ ಉಂಟು ಮಾಡಬಹುದಾದ ಸೂಕ್ಷ್ಮ ವಿಚಾರವೊಂದರ ಕುರಿತು ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕೆ ಟೈಮ್ಸ್ ನೌ ವಾಹಿನಿಗೂ ಎನ್‍ಬಿಎಸ್‍ಎ ಎಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News