ಮೊಬೈಲ್ ಕರೆ ಕದ್ದಾಲಿಕೆ ಪ್ರಕರಣ: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ರಿಗೆ ನೋಟಿಸ್

Update: 2021-06-23 17:47 GMT

ಬೆಂಗಳೂರು, ಜೂ.23: ಮೊಬೈಲ್ ಕರೆ ಕದ್ದಾಲಿಕೆ ಆರೋಪ ಪ್ರಕರಣ ಸಂಬಂಧ ಬಿಜೆಪಿ ಅರವಿಂದ್ ಬೆಲ್ಲದ್ ಅವರಿಗೆ ಕೇಂದ್ರ ವಿಭಾಗದ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

ಮೊಬೈಲ್ ಕರೆ ಕದ್ದಾಲಿಕೆ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ನಿಯೋಜಿತ ಎಸಿಪಿ ಪೃಥ್ವಿ, ವಿಚಾರಣೆಗೆ ಹಾಜರಾಗುವಂತೆ ಅರವಿಂದ್ ಬೆಲ್ಲದ್‍ಗೆ ನೋಟಿಸ್ ಜಾರಿ ಮಾಡಿದ್ದಾರೆ. ಜೂ.24ರಂದು ಡಿಸಿಪಿ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ.

ಮತ್ತೊಂದೆಡೆ ಬೆಲ್ಲದ್ ನೀಡಿದ್ದ ನಂಬರ್ ನ ಸಿಡಿಆರ್ ಪಡೆದ ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯು ಹೈದರಾಬಾದ್ ಮೂಲದವನು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆತ ಶಾಸಕರ ಆಪ್ತ ಎಂಬುದು ಬಯಲಿಗೆ ಬಂದಿದೆ. ಶಾಸಕರಿಗೆ ನಾನು ತುಂಬಾ ಆಪ್ತ ಎಂದು ಸಿಮ್ ವಾರಸುದಾರ ಹೇಳಿಕೊಂಡಿದ್ದಾನೆ.

ಮತ್ತೊಂದೆಡೆ ತನಿಖೆ ನಡೆಸುತ್ತಿದ್ದ ಕಬ್ಬನ್ ಪಾರ್ಕ್ ಠಾಣೆ ಎಸಿಪಿ ಯತಿರಾಜ್ ಜಾಗಕ್ಕೆ ಶೇಷಾದ್ರಿಪುರ ಎಸಿಪಿಯನ್ನು ನಿಯೋಜಿಸುವಂತೆ ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಆದೇಶಿಸಿದ್ದಾರೆ. ಇನ್ನು, ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಪೊಲೀಸ್ ಆಯುಕ್ತ ಆಗಿದ್ದ ಅವಧಿಯಲ್ಲಿ ಫೋನ್ ಕದ್ದಾಲಿಕೆ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆಯ ಉಸ್ತುವಾರಿಯನ್ನು ಇದೀಗ ಶೇಷಾದ್ರಿಪುರದ ಮಹಿಳಾ ಎಸಿಪಿ ಪೃಥ್ವಿ ಅವರಿಗೆ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News