ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಏಕಾಂಗಿ ಪ್ರತಿಭಟನೆ

Update: 2021-06-24 13:12 GMT

ಚಿಕ್ಕಮಗಳೂರು, ಜೂ.24: ಜಿಲ್ಲೆಯ ಅಭಿವೃದ್ಧಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ವಿವಿಧ ಸಭೆಗಳಿಗೆ ತನ್ನನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗುತ್ತಿದೆ. ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಸಭೆಗೆ ಆಹ್ವಾನ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ತನ್ನನ್ನು ಸಭೆಗೆ ಕರೆಯದೇ ನಿರ್ಲಕ್ಷ್ಯ ಮಾಡುತ್ತಿರುವುದಲ್ಲದೇ ಅವಮಾನವನ್ನೂ ಮಾಡುತ್ತಿದ್ದಾರೆಂದು ಆರೋಪಿಸಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಧರಣಿ ನಡೆಸಿದ ಘಟನೆ ನಡೆಯಿತು.

ಗುರುವಾರ ಬೆಳಗ್ಗೆ 11ರ ಹೊತ್ತಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಅವರು ಜಿಲ್ಲಾಧಿಕಾರಿ ಕಚೇರಿ ಧ್ವಾರದಲ್ಲೇ ಕಳಿತು ದಿಢೀರ್ ಧರಣಿ ನಡೆಸಿದರು.

ಈ ವೇಳೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹಾಗೂ ಸ್ಥಳೀಯ ಶಾಸಕ ಸಿ.ಟಿ.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಎಸ್.ಅಂಗಾರ ಅವರು, ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರಗತಿಪರಿಶೀಲನಾ ಸಭೆಗಳೂ ಸೇರಿದಂತೆ ಸರಕಾರದ ಕಾರ್ಯಕ್ರಮಗಳಿಗೆ ತಮ್ಮ ಪಕ್ಷದ ಶಾಸಕರಿಗೆ ಆಹ್ವಾನ ನೀಡಿ, ಬೇರೆ ಪಕ್ಷಗಳ ಶಾಸಕರನ್ನು ನಿರ್ಲಕ್ಷ್ಯಿಸುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇಂತಹ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿರಲು ಅರ್ಹರಲ್ಲ ಎಂದು ಕಿಡಿಕಾರಿದರು.

ಈ ವೇಳೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹಾಗೂ ಅಪರ ಜಿಲ್ಲಾಧಿಕಾರಿ ರೂಪಾ, ಡಿಸಿ ಕಚೇರಿಯ ಧ್ವಾರದ ಬಳಿ ಆಗಮಿಸಿ, ಧರಣಿ ಕುಳಿತಿದ್ದ ಶಾಸಕ ಭೋಜೇಗೌಡ ಅವರ ಮನವೊಲಿಸಲು ಮುಂದಾದರು. ಆದರೆ ಭೋಜೇಗೌಡ ಧರಣಿಯನ್ನು ಮುಂದುವರಿಸಿದರು. ಜಿಲ್ಲಾಧಿಕಾರಿ ಹಾಗೂ ಎಡಿಸಿ ಸಮ್ಮುಖದಲ್ಲೇ ಸಚಿವ ಎಸ್.ಅಂಗಾರ ಸೇರಿದಂತೆ ಜಿಲ್ಲಾಡಳಿತ ಹಾಗೂ ಆಡಳಿತ ಪಕ್ಷದ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.

ತಾನು ಶಿಕ್ಷಕರನ್ನು ಪ್ರತಿನಿಧಿಸುವ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಚುನಾಯಿತನಾಗಿರುವ ಶಾಸಕನಾಗಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿ, ಸಮಸ್ಯೆಗಳ ಚರ್ಚೆಯಲ್ಲಿ ಪಾಲ್ಗೊಳ್ಳಲು ತನಗೂ ಅಧಿಕಾರವಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದ ಸಭೆ, ಕಾರ್ಯಕ್ರಮಗಳಿಗೆ ತಮ್ಮ ಪಕ್ಷದ ಶಾಸಕರಿಗೆ ಮಾತ್ರ ಆಹ್ವಾನ ನೀಡುತ್ತಿದ್ದು, ತನನ್ನು ಯಾವ ಸಭೆಗೂ ಆಹ್ವಾನಿಸುತ್ತಿಲ್ಲ, ಸಭೆಗೆ ಆಹ್ವಾನಿಸದಂತೆ ಯಾರು ಒತ್ತಡ ಹೇರಿದ್ದಾರೆ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

ತನಗೆ ಭೋಜೇಗೌಡ ಎಂಬ ಕಾರಣಕ್ಕೆ ಸಚಿವರು, ಜಿಲ್ಲಾಡಳಿತ ಬೆಲೆ ಕೊಡುವುದು ಬೇಡ, ವಿಧಾನಪರಿಷತ್ ಸದಸ್ಯನಾಗಿರುವ ಕಾರಣಕ್ಕೆ ಆ ಹುದ್ದೆಗಾದರೂ ಬೆಲೆ ಕೊಡಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಪ್ರಭಾವಿ ಶಾಸಕರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಭೆಗೆ ಆಹ್ವಾನಿಸಿದರೇ ಅಭಿವೃದ್ಧಿ ವಿಚಾರದಲ್ಲಿನ ಲೋಪ, ಭ್ರಷ್ಟಾಚಾರದಂತಹ ಹುಳುಕುಗಳನ್ನು ಎತ್ತಿ ಹಿಡಿಯುತ್ತೇನೆಂಬ ಭೀತಿಯಿಂದ ಸಭೆಗೆ ಆಹ್ವಾನಿಸುತ್ತಿಲ್ಲ ಎಂದು ಆರೋಪಿಸಿದ ಶಾಸಕ ಭೋಜೇಗೌಡ, ಸಚಿವರು ಮತ್ತು ಜಿಲ್ಲಾಧಿಕಾರಿ ಸರಕಾರಿ ಪ್ರೋಟೋಕಾಲ್ ಉಲ್ಲಂಘನೆ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು. 

ಎಸ್.ಅಂಗಾರ ಅವರು ನಾಮಕಾವಸ್ಥೆಗೆ ಸಚಿವರನ್ನಾಗಿ ಮಾಡಲಾಗಿದೆ. ಅವರು ಉಸ್ತುವಾರಿ ಸಚಿವರಾದ ಮೇಲೆ ಬೇಕಾಬಿಟ್ಟಿಯಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಸಚಿವರ ಸಭೆಗೆ ಬಿಜೆಪಿ ಪಕ್ಷದ ಶಾಸಕರು ಭಾಗವಹಿಸಬಹುದಾದರೇ ನಾನು ಏಕೆ ಭಾಗವಹಿಸಬಾರದು ಎಂದು ಪ್ರಶ್ನಿಸಿದರು.

ಸಚಿವರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮಂತ್ರಿಗಳು, ಶಾಸಕರ ಸಮ್ಮುಖದಲ್ಲೇ ಕಚ್ಚಾಡಿದ್ದಾರೆ. ಸಚಿವರು, ಶಾಸಕರು ಇದನ್ನು ನೋಡಿಯೂ ಸುಮ್ಮನಾಗಿದ್ದಾರೆ. ಉದ್ಧಟತನ ತೋರುವ ಅಧಿಕಾರಿಗಳನ್ನು ಅಮಾನತು ಮಾಡಬೇಕಿತ್ತು, ಆದರೆ ಸಚಿವರು ಅಧಿಕಾರಿಗಳ ಇಂತಹ ನಡವಳಿಕೆಯನ್ನೂ ಸಹಿಸಿಕೊಂಡಿದ್ದಾರೆ. ಇಂತವರು ಸಚಿವರಾಗಿರಲು ಅರ್ಹರಲ್ಲ ಎಂದು ಗುಡುಗಿದರು.

ಸಚಿವ ಅಂಗಾರ ಅವರು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಮೇಲೆ ಗೌರವವಿದೆ. ಆದರೆ ಸಚಿವರಾಗಿರುವ ಅಂಗಾರ ತಮ್ಮ ಸಾಧನೆ ಏನೆಂದು ಹೇಳಬೇಕು. ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯಲ್ಲಿ ಅವರ ಸಾಧನೆ ಬಂದ ಪುಟ್ಟ, ಹೋದ ಪುಟ್ಟ ಎಂಬಂತಾಗಿದೆ. ನಾನು ಇಲ್ಲಿಂದ ಎದ್ದು ಹೋಗಲ್ಲ. ಬೇಕಿದ್ದರೇ ಬಂಧಿಸಿ. ರಾಜಕೀಯ ಮಾಡುವುದಿದ್ದರೇ ಪಕ್ಷದ ಕಚೇರಿಯಲ್ಲಿ ಮಾಡಿ. ಇಂತಹ ತಾರತಮ್ಯವನ್ನು ಹಲವು ಬಾರಿ ಕಂಡಿದ್ದೇನೆ. ಇದರಿಂದ ನೊಂದು ಇಂದು ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಈ ವೇಳೆ ಭೋಜೇಗೌಡ ಹೇಳಿದರು.

ಬಳಿಕ ಜಿಲ್ಲಾಧಿಕಾರಿ ಮನವೊಲಿಕೆಗೆ ಪ್ರಯತ್ನಿಸಿದ್ದರಿಂದ ಧರಣಿ ಕೈಬಿಟ್ಟ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಪಕ್ಷದ ಮುಖಂಡರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು.

ಅಧಿಕಾರಿಗಳ ಸಭೆ ಕರೆದಾಗ ಸಾಮಾನ್ಯವಾಗಿ ಶಾಸಕರನ್ನು ಆಹ್ವಾನಿಸುವ ಪ್ರಮೇಯ ಇರುವುದಿಲ್ಲ. ಜಿಲ್ಲಾ ಮಂತ್ರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದಾಗಿ ಕೆಲವು ಶಾಸಕರು ಆಸಕ್ತಿಯಿಂದ ಸಭೆಗೆ ಆಗಮಿಸುತ್ತಾರೆ. ಶಾಸಕರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವುದರಿಂದ, ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುವುದರಿಂದ ಸಭೆಯಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲೂ ಸಭೆಗೆ ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಶಾಸಕರನ್ನು ಬರಬೇಡಿ ಎನ್ನುವುದೂ ಕಷ್ಟ. ಸಚಿವರು ಎಲ್ಲರಿಗೂ ತಿಳಿಸಲು ಹೇಳಿದ್ದರೇ ಎಲ್ಲ ಶಾಸಕರಿಗೂ ಆಹ್ವಾನ ನೀಡುತ್ತೇವೆ. ಕೆಲ ಸಂದರ್ಭ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಭಾಗವಹಿಸಿದ್ದಾರೆ. ಇದನ್ನು ಶಾಸಕ ಎಸ್.ಎಲ್.ಭೋಜೇಗೌಡ ಅವರ ಗಮನಕ್ಕೂ ತಂದಿದ್ದೇನೆ. ಮುಂದೆ ಇಂತಹ ಗೊಂದಲಗಳು ನಡೆಯಲು ಬಿಡುವುದಿಲ್ಲ.
- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News