ಆನ್‍ಲೈನ್ ತರಗತಿ ನಿಲ್ಲಿಸಿ, ಶಾಲೆ ಆರಂಭಿಸಿ: ಸರಕಾರಕ್ಕೆ ಶಾಸಕ ಕುಮಾರಸ್ವಾಮಿ ಮನವಿ

Update: 2021-06-24 11:27 GMT

ಚಿಕ್ಕಮಗಳೂರು, ಜೂ.24: ಬಡವರು, ಕೂಲಿ ಕಾರ್ಮಿಕರ ಮಕ್ಕಳು ಮೊಬೈಲ್‍ನಿಂದಾಗಿ ಆಟ, ಪಾಠವಿಲ್ಲದೇ ಬೌದ್ಧಿಕವಾಗಿ ದಿವಾಳಿಯಾಗುತ್ತಿದ್ದಾರೆ. ಸರಕಾರ ಆನ್‍ಲೈನ್ ಪಾಠವನ್ನು ನಿಲ್ಲಿಸಬೇಕು. ಮಲೆನಾಡಿನಲ್ಲಿ ಕೊರೋನ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಸರಕಾರ ಕೂಡಲೇ ಶಾಲೆಗಳನ್ನು ಆರಂಭಿಸಬೇಕು ಎಂದು ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೂಡಿಗೆರೆ ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳ್ಳವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ದುಬಾರಿ ಮೊಬೈಲ್‍ಗಳನ್ನು ಕೊಡಿಸುತ್ತಾರೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಾರೆ. ಆದರೆ ಬಡವರು, ಕಾರ್ಮಿಕರ ಮಕ್ಕಳಿಗೆ ದುಬಾರಿ ಮೊಬೈಲ್ ಕೊಡಿಸಲು ಸಾಧ್ಯವಾಗುತ್ತಿಲ್ಲ. ಆನ್‍ಲೈನ್ ತರಗತಿಗಳಿಂದಾಗಿ ಮಕ್ಕಳು ಮೊಬೈಲ್‍ಗಳ ದಾಸರಾಗುತ್ತಿದ್ದಾರೆ. ಆಟಪಾಠವಿಲ್ಲದೇ ಮಕ್ಕಳು ಬೌದ್ಧಿಕವಾಗಿ ದಿವಾಳಿಯಾಗುತ್ತಿದ್ದಾರೆ ಎಂದರು.

ಗ್ರಾಮೀಣ ಭಾಗದಲ್ಲಿ ಬಡವರ್ಗದ ಜನರು ತಮ್ಮ ಮಕ್ಕಳ ಆನ್‍ಲೈನ್ ಪಾಠಕ್ಕೆ ಹರಸಾಹಸ ಪಡುತ್ತಿದ್ದಾರೆ. ನೆಟ್‍ವರ್ಕ್ ಸಿಗದೇ ಮರ ಹತ್ತಿ ಕೂರುವಂತಹ ಅವ್ಯವಸ್ಥೆ ನಿರ್ಮಾಣವಾಗಿದ್ದು, ಮಕ್ಕಳಿಗೆ ಸರಿಯಾಗಿ ಪಾಠ ಕೇಳಲೂ ಸಾಧ್ಯವಾಗುತ್ತಿಲ್ಲ. ಬಡವರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಮರಿಚೀಕೆಯಾಗಿದ್ದು, ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಆತಂಕದಲ್ಲಿದ್ದು, ನಮ್ಮ ಮಕ್ಕಳಿಗೆ ಶಿಕ್ಷಣ ಸಿಗಲ್ಲ ಎಂಬ ಮನೋಭಾವನೆಯಲ್ಲಿದ್ದಾರೆ. ಆದ್ದರಿಂದ ಆನ್‍ಲೈನ್ ಕ್ಲಾಸ್‍ಗಳನ್ನು ನಿಲ್ಲಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲೂ ಸೋಂಕು ಇಳಿಮುಖವಾಗಿದೆ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ಶಾಲೆಗಳ ಆರಂಭಕ್ಕೆ ಮುಂದಾಗಬೇಕು. ಮಕ್ಕಳ ಪೋಷಕರು ಮಾಧ್ಯಮಗಳಲ್ಲಿ ಬರುವ ಸುದ್ದಿಗಳಿಗೆ ಕಿವಿಗೊಡಬಾರದು. ಸರಕಾರ ಶಾಲೆಗಳನ್ನು ಆರಂಭಿಸಿದರೆ ಅಗತ್ಯ ಕ್ರಮಗಳನ್ನು ಕೈಗೊಳ್ಳತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಅನಗತ್ಯ ಭಯ ಪಡೆದೇ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯಬಾರದು ಎಂದು ಶಾಸಕ ಕುಮಾರಸ್ವಾಮಿ ಹೇಳಿದರು.

ಮಲೆನಾಡಿನಲ್ಲಿ ಕೊರೋನದಿಂದ ಯಾವುದೇ ಆಪತ್ತು ಸಂಭವಿಸಿಲ್ಲ. ಮಲೆನಾಡಿನಲ್ಲಿ ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ನೆಟ್‍ವರ್ಕ್ ಸಮಸ್ಯೆ ಹೆಚ್ಚಾಗಿರುವುದರಿಂದ ಸಿಎಂ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಮಲೆನಾಡಿನಲ್ಲಿ ಶಾಲೆಗಳನ್ನು ಆರಂಭಿಸಲು ಮುಂದಾಗಬೇಕು. ಈ ಸಂಬಂಧ ತಾನು ಸರಕಾರಕ್ಕೆ ಮನವಿ ಮಾಡುವುದಾಗಿ ಇದೇ ವೇಳೆ ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News