ಡೆಲ್ಟಾ ಪ್ಲಸ್ ಸೋಂಕು ಮತ್ತೊಬ್ಬ ವ್ಯಕ್ತಿಯಲ್ಲಿಯೂ ಪತ್ತೆ: ಸಚಿವ ಡಾ. ಸುಧಾಕರ್

Update: 2021-06-24 12:03 GMT

ಬೆಂಗಳೂರು, ಜೂ.24: `ಕರ್ನಾಟಕ ರಾಜ್ಯದಲ್ಲಿ ಅಧಿಕೃತವಾಗಿ ಎರಡು ಕೋವಿಡ್ `ಡೆಲ್ಟಾ ಪ್ಲಸ್' ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದ ಅವರು, `ನಿನ್ನೆ ಮೈಸೂರಿನಲ್ಲಿ ಒಂದು ಕೇಸ್ ಪತ್ತೆ ಆಗಿತ್ತು. ಇದೀಗ ಬೆಂಗಳೂರಿನಲ್ಲಿ ಹಿರಿಯ ವ್ಯಕ್ತಿಯೊಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕು ಇರುವುದು ಕಂಡು ಬಂದಿದೆ. ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದವರನ್ನ ಪರೀಕ್ಷೆ ಮಾಡಲಾಗಿದ್ದು, ಇಂದು ವರದಿ ಬರಲಿದೆ' ಎಂದು ತಿಳಿಸಿದರು.

`ಡೆಲ್ಟಾ ಪ್ಲಸ್ ವೈರಸ್ ಕುರಿತು ಯಾರು ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ. ಡೆಲ್ಟಾ ಪ್ಲಸ್ ಮತ್ತು ಡೆಲ್ಟಾ ವೈರಸ್ ಒಂದೇ ಗುಣಲಕ್ಷಣ ಹೊಂದಿದೆ. ಆದರೆ, ಚಿಕಿತ್ಸೆ ವಿಧಾನ ಸ್ವಲ್ಪ ಬೇರೆ ಇದೆ. ಡೆಲ್ಟಾ ಪ್ಲಸ್ ವೈರಸ್ ಸೇರಿದಂತೆ ಎಲ್ಲ ರೂಪಾಂತರ ವೈರಸ್‍ಗೆ ಲಸಿಕೆ ಪರಿಣಾಮಕಾರಿಯಾಗಿದೆ. ಈಗಾಗಲೇ 2 ಸಾವಿರ ಸ್ಯಾಂಪಲ್‍ಗಳ ಟೆಸ್ಟ್ ಆಗಿದ್ದು, ಮತ್ತಷ್ಟು ಹೆಚ್ಚಳ ಮಾಡಲಾಗುತ್ತದೆ. ಈಗಾಗಲೇ 6 ಜೀನೋಮ್ ಲ್ಯಾಬ್ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದ್ದು, ಮತ್ತಷ್ಟು ಸ್ಯಾಂಪಲ್‍ಗಳನ್ನ ಹೆಚ್ಚಳ ಮಾಡುತ್ತೇವೆ' ಎಂದು ಅವರು ತಿಳಿಸಿದರು.

`ಕೇರಳದಲ್ಲಿ ಸೋಂಕು ಹೆಚ್ಚಾಗಿದ್ದು, ಇದರ ಬಗ್ಗೆ ನಮಗೆ ಸ್ವಲ್ಪ ಆತಂಕ ಇದೆ. ಶೇ.4-5ರಷ್ಟು ಸೋಂಕು ಕೇಸ್ ಕೇರಳದಲ್ಲಿ ಬರುತ್ತಿದೆ. ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಕ್ಕಳಿಗೆ ಲಸಿಕೆ ಅವಶ್ಯಕತೆ ಇಲ್ಲ ಎಂಬ ಐಸಿಎಂಆರ್ ಮುಖ್ಯಸ್ಥರ ಹೇಳಿಕೆ ಅಧಿಕೃತವಾಗಿ ನಮಗೆ ಮಾಹಿತಿ ಬಂದಿಲ್ಲ. ಆದರೆ ಮಕ್ಕಳಿಗೆ ತೀವ್ರತರವಾದ ಸಮಸ್ಯೆ ಉಂಟಾಗುವುದಿಲ್ಲ ಎನ್ನುವ ವಾದವಿದೆ' ಎಂದು ತಿಳಿಸಿದರು.

`ತಜ್ಞರು, ಸಂಶೋಧಕರು ಮಕ್ಕಳಿಗೆ ಭೀಕರ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಉತ್ತಮವಾದ ಅಂಶ. ಆ ನಿಟ್ಟಿನಲ್ಲಿ ನಾವು ವಿಚಾರ ಮಾಡಿದ್ದು, ನಾವು ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸುವ ಕೆಲಸ ಮಾಡುತ್ತೇವೆ. ಏಕೆಂದರೆ ಇದರ ಸ್ವರೂಪ, ಈ ವೈರಸ್ ಗುಣ, ಸ್ವಭಾವ ಹೊಸದಾಗಿ ಇರುವುದರಿಂದ ನಾವು ಹೆಚ್ಚು ನಿಗಾ ಇಟ್ಟಿದ್ದೇವೆ. ಅಲ್ಲದೆ, ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಲಿದ್ದೇವೆ ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News