ಪದವಿ ಸೇರಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಲಸಿಕೆ: ಡಿಸಿಎಂ ಡಾ. ಅಶ್ವತ್ಥ ನಾರಾಯಣ

Update: 2021-06-24 12:15 GMT

ಬೆಂಗಳೂರು, ಜೂ. 24: `ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಆದ್ಯತೆ ಮೇಲೆ ಕೋವಿಡ್ ಲಸಿಕೆ ನೀಡಲಾಗುವುದು' ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಗುರುವಾರ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, `ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಹಾಗೂ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಆಭಿಯಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿ ಆಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಲಸಿಕೆ ಹಾಕಿದ ನಂತರ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಯಿತು. ಕಾಲೇಜು ಆರಂಭಕ್ಕೆ ಮೊದಲೇ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಲಸಿಕೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದಿರುವ ಅವರು ಆಯಾ ಕಾಲೇಜುಗಳಲ್ಲಿಯೇ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

`ಕೋವಿಡ್ ಲಸಿಕೆ ಪಡೆಯಲು ಆಯಾ ಸಂಸ್ಥೆಗಳಲ್ಲಿ ನೀಡಲಾಗುವ ದೃಢೀಕರಣ ಪತ್ರ ಹಾಜರುಪಡಿಸಬೇಕು. ಪ್ರತಿ ಕಾಲೇಜಿನ ಮುಖ್ಯಸ್ಥರು ಹಾಗೂ ಇನ್ನೊಬ್ಬ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗುವುದು. ಈ ಲಸಿಕೀಕರಣಕ್ಕೆ ಪ್ರತ್ಯೇಕ ಮಾರ್ಗಸೂಚಿ (ಎಸ್‍ಒಪಿ) ಇರುತ್ತದೆ. ಅದರಂತೆಯೇ ಲಸಿಕೀಕರಣ ನಡೆಸಲಾಗುವುದು. ಅಲ್ಲದೆ, ನೋಡೆಲ್ ಅಧಿಕಾರಿಗಳು ಆಯಾ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಅರ್ಹರಿಗೂ ತಪ್ಪದೇ ಲಸಿಕೆ ಕೊಡಿಸಬೇಕು ಹಾಗೂ ಅದರ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ' ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ. 

ಲಸಿಕೀಕರಣದ ನಂತರ ನೇರ ತರಗತಿ: `ಈ ವಿಭಾಗದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ನಿರ್ಧರಿಸಲಾಗುವುದು. ಲಸಿಕೆ ಕೊಡಲಿ ಬಿಡಲಿ ಕಲಿಕೆ ನಿಲ್ಲುವುದಿಲ್ಲ. ಡಿಜಿಟಲ್ ವೇದಿಕೆಯಲ್ಲಿ ಕಲಿಕೆ ಮುಂದುವರಿದಿದೆ. ವ್ಯಾಕ್ಸಿನ್ ಪಡೆದ ಮೇಲೆ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಬಹುದು ಅಥವಾ ತಾವಿದ್ದಲ್ಲಿಯೇ ಆನ್‍ಲೈನ್ ಕ್ಲಾಸ್ ಹಾಜರಾಗಬಹುದು. ಹಾಜರಾತಿ ಮಾತ್ರ ಕಡ್ಡಾಯ' ಎಂದು ಅವರು ಸ್ಪಷ್ಟಪಡಿಸಿದರು. 

`ಮೊದಲ ಡೋಸ್ ಪಡೆದ ನಂತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲಾರಂಭಿಸುತ್ತದೆ. ಒಂದು ವೇಳೆ ನೇರ ತರಗತಿಗೆ ಹಾಜರಾದ ನಂತರವೂ ಸೋಂಕು ಬಂದರೆ ಜೀವಕ್ಕೆ ಹಾನಿ ಆಗುವುದಿಲ್ಲ. ಹೀಗಾಗಿ ಎಲ್ಲ ವಿದ್ಯಾರ್ಥಿ, ಸಿಬ್ಬಂದಿ ಲಸಿಕೆ ಪಡೆಯಬೇಕು' ಎಂದ ಅವರು, `ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದ್ದರೂ ಸರಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದೆ. ಯಾವುದಕ್ಕೂ ಕೊರತೆ ಇಲ್ಲ. ಸದ್ಯಕ್ಕೆ ನಮ್ಮಲ್ಲಿ ಲಭ್ಯ ಇರುವ ಲಸಿಕೆಗಳು ಡೆಲ್ಟಾ ಪ್ಲಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ಶಕ್ತಿ ಹೊಂದಿವೆ' ಎಂದು ಮಾಹಿತಿ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News