×
Ad

ತುಮಕೂರು: ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳು ಮೃತ್ಯು

Update: 2021-06-24 18:47 IST
ಸಾಂದರ್ಭಿಕ ಚಿತ್ರ

ತುಮಕೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ ಮತ್ತು ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತಾಲೂಕು ಕೋರಾ ಪೊಲೀಸ್ ಠಾಣೆ ಸರಹದ್ದಿನಲ್ಲಿಂದು ನಡೆದಿದೆ. 

ತಾಲ್ಲೂಕಿನ ತುಳಸಿಪುರ ಗ್ರಾಮದ ಸಮೀಪವಿರುವ ತಿರುಮಲಪಾಳ್ಯದ ವಾಸಿ ಕುಮಾರ್ ಎಂಬವರ ಪತ್ನಿ ಹೇಮಲತಾ (34) ಹಾಗೂ ಮಕ್ಕಳಾದ ಮಾನಸ (6), ಪೂರ್ವಿಕ (3) ಎಂಬುವರೇ ಬಾವಿಗೆ ಬಿದ್ದು ಸಾವನ್ನಪ್ಪಿರುವ ದುರ್ದೈವಿಗಳು.

ಇಂದು ಪೌರ್ಣಾಮಿಯಾದ ಪ್ರಯುಕ್ತ ತೋಟಕ್ಕೆ ಮೊಸರನ್ನ ಎಡೆ ಇಡಲೆಂದು ಹೋಗಿದ್ದಾರೆ. ಆ ಸಂದರ್ಭದಲ್ಲಿ ಮೊದಲನೆ ಮಗಳು ಮಾನಸ ಬಾವಿಯ ದಡದಲ್ಲಿದ್ದ ಸೀಬೆಹಣ್ಣಿನ ಮರದಲ್ಲಿ ಸೀಬೆಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ಆ ಸಂದರ್ಭದಲ್ಲಿ ಜತೆಯಲ್ಲೇ ಇದ್ದ ಮತ್ತೊಂದು ಮಗು ಪೂರ್ವಿಕಾಳು ಅಕ್ಕನಂತೆಯೇ ಬಾವಿಗೆ ಬಿದ್ದಿದ್ದಾಳೆ. ತನ್ನ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ತಾಯಿ ಹೇಮಲತಾ ಮಕ್ಕಳನ್ನು ರಕ್ಷಿಸಲೆಂದು ಬಾವಿಗೆ ಹಾರಿದ್ದಾರೆ. ದುರಾದೃಷ್ಟವಶಾತ್ ತಾಯಿ ಮತ್ತು ಇಬ್ಬರು ಮಕ್ಕಳು ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಕೋರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರವಾಡ್, ಡಿವೈಎಸ್ಪಿ ಶ್ರೀನಿವಾಸ್, ಸರ್ಕಲ್ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ, ಕೋರಾ ಪಿಎಸ್ಐ ಹರೀಶ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News