×
Ad

ಚುನಾವಣೆಗೆ ಇನ್ನೂ ಎರಡು ವರ್ಷ ಇದೆ, ಈಗಲೇ ಸಿಎಂ ವಿಚಾರ ಚರ್ಚೆ ಸರಿಯಲ್ಲ: ಡಾ.ಜಿ.ಪರಮೇಶ್ವರ್

Update: 2021-06-24 22:40 IST

ಮೈಸೂರು,ಜೂ.24: ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ ಈಗಲೇ ಸಿಎಂ ವಿಚಾರ ಚರ್ಚೆ ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಗುರುವಾರ ಭೇಟಿ ನೀಡಿ ಸುತ್ತೂರು ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ ಈಗಲೇ ಸಿಎಂ ವಿಚಾರ ಚರ್ಚೆ ಸರಿಯಲ್ಲ, ಮೊದಲು ನಾವೆಲ್ಲ ಚುನಾವಣೆಯಲ್ಲಿ ಗೆಲ್ಲಬೇಕು, ಪಕ್ಷಕ್ಕೆ ಬಹುಮತ ಬರಬೇಕು, ನಂತರ ಶಾಸಕಾಂಗ ಪಕ್ಷ ಸಭೆ ನಡೆದು ಶಾಸಕರುಗಳು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ನಂತರ ಹೈಕಮಾಂಡ್ ಇಂತವರೇ ಮುಖ್ಯಮಂತ್ರಿ ಎಂದು ಸೂಚಿಸುತ್ತದೆ. ಹಾಗಾಗಿ ಇದರ ಚರ್ಚೆ ಅಗತ್ಯವಿಲ್ಲ ಎಂದರು.

ನೀವು ಸಿಎಂ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಸಮಯ ಸಂದರ್ಭ ಬಂದಾಗ ಹೇಳುತ್ತೇನೆ. ಈಗ ಯಾರೂ ಇಂತವರೇ ಸಿಎಂ ಎಂದು ಹೇಳುವುದು ಬೇಡ ಎಂದು ಮನವಿ ಮಾಡಿದರು.

ಪರಮೇಶ್ವರ್ ಸುತ್ತೂರು ಮಠದ ಆವರಣಕ್ಕೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಜಯಕಾರ ಹಾಕಿ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂದು ಘೋಷಣೆ ಕೂಗಿದ್ದಕ್ಕೆ, ಯಾರೂ ಈ ರೀತಿಯ ಘೋಷಣೆ ಕೂಗಬಾರದು ಎಂದು ಸೂಚಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾರ, ಶಾಲು ಮತ್ತು ಮೈಸೂರು ಪೇಟ ಹಾಕಿ ಬರಮಾಡಿಕೊಂಡರು. ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪ ಅಮರ್ನಾಥ್,  ಕಾಂಗ್ರೆಸ್ ಮುಖಂಡರುಗಳಾದ ಎಚ್.ಎ.ವೆಂಕಟೇಶ್, ಎಂ.ಲಕ್ಷ್ಮಣ್, ಹೆಡತಲೆ ಮಂಜುನಾಥ್, ಎನ್.ಭಾಸ್ಕರ್, ರವಿ, ಮಹೇಶ್, ಶಿವಪ್ರಸಾದ್ ಸೇರಿದಂತೆ  ಹಲವು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News