ಪಶುಪಾಲಕರ ಚಲನೆ ಮತ್ತವರ ಸಂಘರ್ಷ ನೆಲೆ

Update: 2021-06-26 04:26 GMT


ಡಾ.ನೆಲ್ಲುಕುಂಟೆ ವೆಂಕಟೇಶ್

                                                                                     ► ಭಾಗ- 1
ಇತಿಹಾಸದ ಅನುಸಂಧಾನಕ್ಕೂ ರಾಷ್ಟ್ರವಾದದ ನಿರ್ಮಾಣಕ್ಕೂ ನೇರ ಸಂಬಂಧವಿದೆ. ತಳಿವಿಜ್ಞಾನದ ಪ್ರಮೇಯಗಳು ರೂಪುಗೊಂಡ ನಂತರ ರೂಪಿತ ಚರಿತ್ರೆಯ ನಿರ್ವಚನೆಯು ತೀವ್ರ ಬಿಕ್ಕಟ್ಟಿನಲ್ಲಿದೆ. ಭಾರೀ ಪರಂಪರೆಗೆ ವಾರಸುದಾರರು ನಾವು ಎಂದು ಬೀಗುತ್ತಿದ್ದವರ ನೆನಪುಗಳಿಗೆ ಅಷ್ಟೊಂದು ಆಳವಿಲ್ಲ ಮತ್ತು ಯಾರಿಗೆ ಪರಂಪರೆಯೇ ಇಲ್ಲ ಎಂದು ತಿರಸ್ಕರಿಸಲಾಗಿತ್ತೊ ಅವರ ಹೆಜ್ಜೆ ಗುರುತುಗಳು ಸಿಕ್ಕಾಪಟ್ಟೆ ಆಳವಾಗಿರುವುದನ್ನು ತಳಿವಿಜ್ಞಾನವು ತೋರಿಸುತ್ತಿದೆ. ತಳಿ ವಿಜ್ಞಾನದ ಟೂಲುಗಳನ್ನು ಹಿಡಿದು ಚರಿತ್ರೆಯ ಹೊಸ ಅನುಸಂಧಾನವನ್ನು ಮಾಡಲೇಬೇಕಾಗಿದೆ. ಪಶ್ಚಿಮದ ದೇಶಗಳ ಸಮಾಜ ವಿಜ್ಞಾನಗಳ ವಿದ್ವಾಂಸರುಗಳು ಈಗಾಗಲೇ ನಿರ್ವಚಿತ ಚರಿತ್ರೆಯನ್ನೆ ಮುರಿದು ಕಟ್ಟುತ್ತಿದ್ದಾರೆ. ನಮ್ಮಲ್ಲೂ ಅಂತಹ ಕೆಲಸಗಳು ಆಗಬೇಕು.ಇಲ್ಲದಿದ್ದರೆ ನಮ್ಮ ಮಕ್ಕಳು ಅದೇ ಹಳೆಯ ಇಸವಿಗಳನ್ನು, ರಾಜರ ದಿಗ್ವಿಜಯದ ಕತೆಗಳನ್ನು ಬಾಯಿಪಾಠ ಮಾಡಿಕೊಂಡು ಕೂರಬೇಕಾಗುತ್ತದೆ. ಎದುರಾಳಿಯೊಬ್ಬನಿಲ್ಲದಿದ್ದರೆ ಚರಿತ್ರೆಯ ನಿರ್ವಚನಕ್ಕೆ ಅರ್ಥವೇ ಇರುವುದಿಲ್ಲ ಎಂಬ ಎಕ್ಸ್ಲೂಸಿವ್ ರಾಜಕಾರಣವು ಪ್ರಬಲವಾಗುತ್ತಲೇ ಹೋಗಿ ನಮ್ಮ ಕಣ್ಣುಗಳನ್ನು ನಾವೇ ಚುಚ್ಚಿಕೊಳ್ಳುವ ಆತ್ಮಹತ್ಯಾತ್ಮಕ ಸ್ಥಿತಿಗೆ ಬಂದು ಬಿಡುತ್ತದೆ. ಇಂತಹ ದೃಷ್ಟಿಕೋನದ ಹಿನ್ನೆಲೆಯಲ್ಲಿ ಈ ಬರಹಗಳು ಕನ್ನಡಕ್ಕೆ ಹೊಸ ದೃಷ್ಟಿಕೋನವನ್ನು ನೀಡಬಲ್ಲವು.

ಕನಿಷ್ಠ ಮೂವತ್ತು ಲಕ್ಷ ವರ್ಷಗಳ ಮನುಷ್ಯನ ವಿಕಾಸದ ಹಾದಿಯಲ್ಲಿ ಪಶುಪಾಲನೆ ಎನ್ನುವುದು ಬಹಳ ಇತ್ತೀಚಿನ ಚಟುವಟಿಕೆ. ಅನೇಕ ಇತಿಹಾಸಕಾರರು ಬೇಟೆ, ಸಂಗ್ರಹಣೆಯ ಜೊತೆಯಲ್ಲೇ ಪಶುಪಾಲನೆ ಇತ್ತು ಅಥವಾ ಅವುಗಳ ನಂತರ ವಿಕಾಸವಾದ ಚಟುವಟಿಕೆ ಎಂದು ವಿವರಿಸುತ್ತಾರೆ. ಇದನ್ನು ತಳಿವಿಜ್ಞಾನ ಮತ್ತು ಪುರಾತತ್ವಶಾಸ್ತ್ರಗಳು ಆಧಾರ ರಹಿತ ಎನ್ನುತ್ತವೆ. ಅವುಗಳ ಪ್ರಕಾರ ಕೃಷಿಯ ನಂತರ ಪಶುಪಾಲನೆ ವಿಕಾಸವಾಗಿದೆ. ಮನುಷ್ಯರ ತೀರದ ಹೊಟ್ಟೆಪಾಡು ಮತ್ತು ಅಗಾಧ ಕುತೂಹಲಗಳು ಕೃಷಿ ಮತ್ತು ಪಶುಪಾಲನೆಯನ್ನು ಅವರ ಚಟುವಟಿಕೆಯ ಭಾಗವಾಗಿಸಿವೆ, ನಾಗರಿಕತೆಯ ವೇಗ ಹೆಚ್ಚಿಸಿವೆ ಜೊತೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವರನ್ನು ಹಿಡಿದು ಗೂಟಕ್ಕೆ ಕಟ್ಟಿ ನಿಲ್ಲಿಸಿವೆ. ದಿಗ್ಭ್ರಮೆ ಹುಟ್ಟಿಸುವ ಸಂಗತಿ ಎಂದರೆ ಆದಿಮ ಮನುಷ್ಯನ ವಿಕಾಸದಲ್ಲಿ ಬೆಂಕಿ, ಆಯುಧ ಮುಂತಾದವುಗಳ ಬಳಕೆಗಳು ಕ್ರಾಂತಿಕಾರಕವಾದವೇ. ಕೆಲವೊಮ್ಮೆ ಚಿಂಪಾಂಜಿಗಳೂ ಕೂಡ ಕೋಲುಗಳನ್ನು ಹಿಡಿದುಕೊಂಡು ಹೊಡೆದಾಡಿಕೊಳ್ಳುತ್ತವೆ ಹಾಗಾಗಿ ಅದರಲ್ಲಿ ಏನು ವಿಶೇಷವಿದೆ ಎಂಬ ಪ್ರಶ್ನೆಯನ್ನು ಎತ್ತಬಹುದು. ಆದರೆ ಮನುಷ್ಯರ ಮೆದುಳು ವಿಕಾಸವಾಗುತ್ತಾ ಹೋದಂತೆ ಅನೇಕ ವ್ಯವಸ್ಥೆಗಳನ್ನು ನಿರ್ಮಿಸಿಕೊಂಡರು. ಹಾಗೆ ನಿರ್ಮಿಸಿಕೊಂಡ ರಚನಾತ್ಮಕತೆಯು ಮನುಷ್ಯ ಮನುಷ್ಯರ ನಡುವೆ ಅನಿವಾರ್ಯವಾದ ಹೊಂದಾಣಿಕೆ ಸಾಧ್ಯವಾಯಿತು. ಧರ್ಮ, ರಾಜಕೀಯ, ಕಲೆ, ಸಾಹಿತ್ಯ ಇತ್ಯಾದಿಗಳ ಜೊತೆಗೆ ರಾಷ್ಟ್ರವೆಂಬ ಸಂರಚನೆಯನ್ನು ಬಹಳ ಇತ್ತೀಚೆಗೆ ಅಳವಡಿಸಿಕೊಳ್ಳಲಾಯಿತು. ಒಂದು ಲಕ್ಷ ಚಿಂಪಾಂಜಿಗಳನ್ನೊ ಇಲ್ಲ ಗೊರಿಲ್ಲಾಗಳನ್ನೊ ಒಂದು ಕ್ರಿಕೆಟ್ ಸ್ಟೇಡಿಯಂನಲ್ಲಿ ಕೂಡಿ ಹಾಕಿದರೆ ಹೇಗಿರಬಹುದು ಯೋಚಿಸಿ ನೋಡಿ ಎನ್ನುತ್ತಾನೆ ಹರಾರಿ. ಬಹುಶಃ ಇಡೀ ಸ್ಟೇಡಿಯಮ್ಮು ರಣಾರಂಪವಾಗಿಬಿಡುತ್ತದೆ. ಆದರೆ ಮನುಷ್ಯರು ಹಾಗಲ್ಲ. ಎಲ್ಲೋ ಕೆಲವೊಮ್ಮೆ ಅವರಿಗೂ ಪೂರ್ವ ಪ್ರವೃತ್ತಿಗಳು ಕೆರಳುವುದುಂಟು, ಆದರೆ ಹಾಗೆ ಮಾಡಬಾರದಿತ್ತು ಎಂಬ ವಿವೇಕ ಹಾಗೂ ಪಶ್ಚಾತ್ತಾಪಗಳು ಬಹುಬೇಗ ಮನುಷ್ಯರನ್ನು ಕಾಡುತ್ತವೆ. ಕನಸು ಮತ್ತು ನೆನಪುಗಳು ಮನುಷ್ಯರ ವಿಶಿಷ್ಟ ಶಕ್ತಿಗಳು. ಬುದ್ಧ, ಮಹಾವೀರ, ಜೀಸಸ್, ಪೈಗಂಬರ್, ಬಸವಣ್ಣ ಮುಂತಾದ ಲೋಕ ಚಿಂತಕರು ಬಂದ ಮೇಲೆ ಕರುಣೆ, ಅಹಿಂಸೆ, ಪಾಪಪ್ರಜ್ಞೆ, ಅಪರಾಧ ಪ್ರಜ್ಞೆಗಳ ವಿವೇಚನೆಯ ಮಾದರಿಗಳ ದಾಖಲೆಗಳನ್ನು ಗಮನಿಸಬಹುದು. ಮನುಷ್ಯರ 14 ಪ್ರಭೇದಗಳಿಗೆ ಸಾಧ್ಯವಾಗದಿದ್ದುದು ಹೋಮೋಸೇಪಿಯನ್ನರಿಗೆ ಯಾಕೆ ಸಾಧ್ಯವಾಯಿತು? ಹೋಮೋಸೇಪಿಯನ್ನರ ಚರಿತ್ರೆಗೆ ವೇಗ ಶುರುವಾಗಿದ್ದೇ ಜೇನಿನಿಂದ. ಜೇನಿನಲ್ಲಿದ್ದ ಸಕ್ಕರೆ ಮುಂತಾದ ಅಂಶಗಳಿಂದ ಮನುಷ್ಯರ ಮೆದುಳಿನ ವಿಕಾಸಕ್ಕೆ ಕಾರಣವಾಗಿದೆೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ನೆನಪು ಮತ್ತು ಕನಸುಗಳು ಹಾಗೂ ಅವುಗಳನ್ನು ಮತ್ತೊಬ್ಬರಿಗೆ ದಾಟಿಸಲು, ದಾಖಲಿಸಲು ಬೇಕಾದ ಅರಿವಿನ ಕ್ರಾಂತಿ ಪ್ರಾರಂಭವಾಗಿದ್ದೇ ಎರಡು ಲಕ್ಷ ವರ್ಷಗಳಿಂದ ಈಚೆಗೆ. ಡೇನಿಯಲ್ ಎವರೆಟ್ಟಿ ಎಂಬ ಅಮೆರಿಕದ ಭಾಷಾ ವಿಜ್ಞಾನಿ, ಮನುಷ್ಯ ಅನ್ವೇಷಣೆ ಮಾಡಿದ ಅತಿದೊಡ್ಡ ತಂತ್ರಜ್ಞಾನಗಳಲ್ಲಿ ಭಾಷೆಯೇ ಅತ್ಯಂತ ಮುಖ್ಯವಾದುದು ಎನ್ನುತ್ತಾನೆ.

 ಇಂಥ ಅರಿವಿನ ಕ್ರಾಂತಿಯನ್ನು ಮಾಡಿದ ಮನುಷ್ಯ ವಿಕಾಸದ ಚಕ್ರಕ್ಕೆ ಅಸಾಧ್ಯ ವೇಗ ನೀಡಿದ. ಹಾಗೆ ಆಫ್ರಿಕಾದಿಂದ ಸರ್ವ ದಿಕ್ಕುಗಳಿಗೆ ಹೊರಟ ಹೋಮೋಸೇಪಿಯನ್ನರೆ ಇವತ್ತಿನ ಮನುಷ್ಯರ ಪೂರ್ವಜರು. ಮನುಷ್ಯರ ಒಟ್ಟಾರೆ 15 ತಳಿಗಳಲ್ಲಿ ಉಳಿದಿರುವ ಏಕೈಕ ತಳಿ ಹೋಮೋಸೇಪಿಯನ್ನರು ಮಾತ್ರ. ನಿಯಾಂಡ್ರತಾಲ್ ಮತ್ತು ಡೆನಿಸೋವಾ ಜನರು ಕಳೆದ 40 ಸಾವಿರ ವರ್ಷಗಳವರೆಗೂ ಬಾಳಿ ಬದುಕಿದ್ದಾರೆ. ಅವರ ಜೀನುಗಳು ಇಂದಿನ ಮನುಷ್ಯರಲ್ಲಿ ಕೇವಲ ಶೇ 2ರಿಂದ 6ರಷ್ಟು ಮಾತ್ರ ಉಳಿದುಕೊಂಡಿವೆ. ಅವರು ಯಾಕೆ ನಾಮಾವಶೇಷವಾಗಿ ಹೋದರು ಎಂಬುದು ಬೇರೆಯೇ ಕಥೆ. ರೋಮ್ ನಗರದ ಬಳಿಯಿರುವ ಗುವಟಾರಿ ಗುಹೆಗಳಲ್ಲಿ ಸುಮಾರು 60 ಸಾವಿರ ವರ್ಷಗಳ ಹಿಂದೆ ಕತ್ತೆ ಕಿರುಬಗಳು ಒಟ್ಟು ಒಂಭತ್ತು ಜನರನ್ನು ಕೊಂದು ತಿಂದಿರುವ ಅವಶೇಷಗಳನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಆ ಗುಹೆಗಳಲ್ಲಿ ಏಳು ಗಂಡಸರು, ಒಬ್ಬ ಹೆಂಗಸು ಮತ್ತು ಒಬ್ಬ ಬಾಲಕನ ದೇಹದ ಅವಶೇಷಗಳು ದೊರೆತಿವೆ (ಲಿವಿಯಾ ಗೆರ್ಶೋನ್-ಸ್ಮಿತ್ ಸೋನಿಯನ್ ಮ್ಯಾಗಝಿನ್, ಮೇ 10-2021). ಈ ರೀತಿ ಯಾವ ಯಾವುವೋ ಒತ್ತಡಗಳು ನಿಯಾಂಡ್ರತಾಲ್ ಮತ್ತು ಡೆನಿಸೋವಾ ಜನರನ್ನು ನಾಮಾವಶೇಷ ಮಾಡಿವೆ.

 ಆಫ್ರಿಕಾದಿಂದ ಹೊರಟ ಕಡೆಯ ಅಲೆ ಸುಮಾರು 65 ಸಾವಿರ ವರ್ಷಗಳ ಆಸುಪಾಸಿನಲ್ಲಿ ಇಂದಿನ ಭಾರತದ ನೆಲಕ್ಕೆ ಬಂದಿದೆ. ಹಾಗೆ ಬಂದ ಗುಂಪಿನ ಹೆಣ್ಣೆ ಇಂದಿನ ಭಾರತದ ಶೇ.80 ಜನರ ತಾಯಿ. ಸುಮಾರು 25 ಸಾವಿರ ವರ್ಷಗಳ ಹಿಂದಿನಿಂದಲೇ ನಿಧಾನಕ್ಕೆ ಹಿಮಯುಗದ ಅವಧಿ ಮುಗಿಯಲಾರಂಭಿಸಿತ್ತು. ಅದು ಸಂಪೂರ್ಣ ಮುಗಿದಿದ್ದು 14 ಸಾವಿರ ವರ್ಷಗಳ ಹಿಂದೆ. ಅಲ್ಲಿಂದೀಚೆಗೆ ಮನುಷ್ಯ ಕೃಷಿಯನ್ನು ಪ್ರಾರಂಭಿಸಿದ. ಆದರೆ ಕೃಷಿ ಪ್ರಾರಂಭವಾಗುವುದಕ್ಕೆ ಮೊದಲೇ ಎರಡು ಸಂಗತಿಗಳು ಮನುಷ್ಯರ ಜೊತೆಯಾಗಿವೆ. ಒಂದು ನಾಯಿ. ಇದು ಸುಮಾರು 40 ಸಾವಿರದಿಂದ 15 ಸಾವಿರ ವರ್ಷಗಳ ಮಧ್ಯದ ಅವಧಿಯಲ್ಲಿ ಮನುಷ್ಯನ ಜೊತೆಯಾಗಿದೆ. 14 ಸಾವಿರ ವರ್ಷಗಳ ಹಿಂದೆ ಮನುಷ್ಯರನ್ನು ಹೂತ ಸಮಾಧಿಗಳಲ್ಲಿ ನಾಯಿಯ ಅವಶೇಷಗಳು ಸಿಕ್ಕಿವೆ. ಇದರ ಜೊತೆಗೆ ಯುರೋಪಿನ ಇಂದಿನ ಫ್ರಾನ್ಸ್, ಸ್ಪೇನ್ ಮುಂತಾದ ಕಡೆ ಜೇನು ಸಾಕಣೆೆ ಮಾಡಿದ ಕುರುಹುಗಳು ದೊರೆತಿವೆ. ಉಳಿದಂತೆ ಪಶುಪಾಲನೆ ಎಂಬುದು ಅಧಿಕೃತವಾಗಿ ಪ್ರಾರಂಭವಾಗಿದ್ದು ಸುಮಾರು 14 ಸಾವಿರ ವರ್ಷಗಳಿಂದ ಈಚೆಗೆ. ಮೆಸಪೊಟೆಮಿಯಾದ ಭೂ ಭಾಗದಲ್ಲಿ ಸುಮಾರು 13 ಸಾವಿರ ವರ್ಷಗಳ ಹಿಂದೆ ಮೊದಲಿಗೆ ಹಂದಿ ಸಾಕಣೆ ಪ್ರಾರಂಭವಾದ ಕುರುಹುಗಳಿವೆ. ಹಸು, ಕುರಿ, ಮೇಕೆ ಸಾಕಣೆಗೆ ಸುಮಾರು 12 ಸಾವಿರ ವರ್ಷಗಳ ಇತಿಹಾಸವಿದೆ. ಎಮ್ಮೆ 10, ಬೆಕ್ಕು 9.5, ಕುದುರೆ 5.5, ಒಂಟೆ 4.5 ಮತ್ತು ಕೋಳಿ ಸಾಕಣೆಗೆ 4 ಸಾವಿರ ವರ್ಷಗಳ ಇತಿಹಾಸವಿದೆ. ಕಳೆದ ಸಾವಿರ ವರ್ಷಗಳಿಂದ ಮನುಷ್ಯ ಯಾವ ಪ್ರಾಣಿಯನ್ನೂ ಪಳಗಿಸಲಾಗಿಲ್ಲ. ಪಶುಪಾಲನೆ ಪ್ರಾರಂಭವಾಗುವ ಒಂದೆರಡು ಸಾವಿರ ವರ್ಷಗಳ ಮೊದಲು ಇಂದಿನ ಟರ್ಕಿಅನಟೋಲಿ ಮತ್ತು ಇರಾನ್ ಪರ್ಶಿಯಾ, ಈಜಿಪ್ಟಿನ ಭಾಗದಲ್ಲಿ ಕೃಷಿ ಪ್ರಾರಂಭವಾಯಿತು. ಗೋಧಿ, ಆಲೂಗಡ್ಡೆ ಮುಂತಾದ ಬೆಳೆಗಳು ಇದೇ ಭೂಭಾಗದಲ್ಲಿ ತಲೆ ಎತ್ತಿದವು. ಜಗತ್ತಿನ ಅತ್ಯಂತ ಪ್ರಾಚೀನ ಹಳ್ಳಿ ಗೊಬೆಕ್ಲಿ ಟೆಪೆ ಇರುವುದು ಟರ್ಕಿಯಲ್ಲಿಯೇ. ಇದು ಸುಮಾರು 12 ಸಾವಿರ ವರ್ಷಗಳ ಹಿಂದಿನದೆಂದು ಹೇಳಲಾಗುತ್ತದೆ. ಮನುಷ್ಯರ ಹಸಿವು ಪಶುಪಾಲನೆ ಮತ್ತು ಕೃಷಿಯಿಂದ ನೀಗತೊಡಗಿದಂತೆ ನೆಲಸು ನಾಡುಗಳು ಪ್ರಾರಂಭವಾದವು. ಅವುಗಳ ಅಗತ್ಯವನ್ನು ಪೂರೈಸಲು ಶ್ರಮ ವಿಭಜನೆ, ವ್ಯಾಪಾರ ಮುಂತಾದವು ಪ್ರಾರಂಭವಾದವು. ಅದರ ಜೊತೆಯಲ್ಲಿ ಆಡಳಿತ ವ್ಯವಸ್ಥೆ, ನಗರಾಡಳಿತಗಳೂ ಪ್ರಾರಂಭವಾದವು. ಪಶ್ಚಿಮ ಮತ್ತು ಮಧ್ಯ ಏಶ್ಯದಲ್ಲಿನ ಹವಾಮಾನ ವೈಪರೀತ್ಯಗಳಿಂದಾಗಿ ಸುಮಾರು ನಾಲ್ಕೈದು ಸಾವಿರ ವರ್ಷಗಳಿಂದ ಜಗತ್ತಿನ ಬೇರೆ ಬೇರೆ ಭೂ ಭಾಗಗಳಿಗೆ ಜನರು ವಲಸೆ ಹೋಗತೊಡಗಿದರು. ಫರ್ಟೈಲ್ ಕ್ರೆಸೆಂಟ್ ಅರ್ಧ ಚಂದ್ರಾಕೃತಿಯ ಫಲವತ್ತಾದ ನೆಲ ಎಂದು ಕರೆಯಲಾಗುವ ಪರ್ಶಿಯಾ, ಈಜಿಪ್ಟ್, ಅನಟೋಲಿ, ಅಸ್ಸೀರಿಯಾ, ಲೆವಾಂಟ್ ಮುಂತಾದ ಭೂಭಾಗದಲ್ಲಿ ಕೃಷಿ ಮತ್ತು ಪಶುಪಾಲನೆಗಳು ಪ್ರಾರಂಭವಾದವು. ಯುಫ್ರೆಟಿಸ್ ನದಿ ಬಯಲುಗಳು, ಕಾಕಸಸ್ ಬೆಟ್ಟಗಳ ತಪ್ಪಲು ಮತ್ತು ಸ್ಟೆಪ್ಪಿ ಹುಲ್ಲುಗಾವಲುಗಳು ಆಧುನಿಕ ಮನುಷ್ಯರ ಚರಿತ್ರೆಯನ್ನು ನಿರ್ಣಾಯಕ ದಿಕ್ಕಿನ ಕಡೆಗೆ ತಿರುಗಿಸಿದವು. ಮನುಷ್ಯರ ನೆಲೆಸುವಿಕೆ ಮತ್ತು ಪಶುಪಾಲನ ಸಂಬಂಧಿ ವಲಸೆಗಳು ಪ್ರಾರಂಭವಾದ ಮೇಲೆ ಎರಡು ರೀತಿಯ ಪ್ರಧಾನ ಅಂಶಗಳನ್ನು ಗಮನಿಸಬಹುದು. ಒಂದು, ಮೊದಲ ಹಂತದ ಕೃಷಿಕರು ಮತ್ತು ಪಶುಪಾಲಕರು ಸ್ತ್ರೀಯರಿಗೂ ಸಮಾನ ಅವಕಾಶಗಳನ್ನು ನೀಡಿದ್ದಾರೆ. ಇಂದಿನ ಇರಾನಿನ ಬಯಲುಗಳಲ್ಲಿ ರೊರಾಷ್ಟ್ರಿಯನ್ ಪೂರ್ವ ಯುಗದಲ್ಲಿ ಅನೇಕ ಸ್ತ್ರೀ ದೇವತೆಗಳು ಇರುವುದನ್ನು ಗಮನಿಸಬಹುದು. ಅರೆದವಿ ದೇವಿ ಸುರ ಅನಾಹಿತ ಸರಸ್ವತಿಗೆ ಸಂವಾದಿ ಪದ ಎಂಬ ಜಲ ದೇವತೆ, ಮತ್ತು ಇನಣ್ಣ- ಇಶ್ತರ್ ಎಂಬ ದೇವತೆಯೂ ಇದ್ದಾಳೆ. ಈಕೆಯನ್ನು ಪ್ರೇಮ, ಕಾಮ, ಸೌಂದರ್ಯ, ಯುದ್ಧ, ನ್ಯಾಯ ಮತ್ತು ರಾಜಕೀಯಾಧಿಕಾರದ ದೇವತೆ ಎಂದು ಕರೆಯಲಾಗುತ್ತದೆ. ಈಕೆಗೆ ಹಸುವಿನ ಕೊಂಬುಗಳಿವೆ. ಈ ಇನಣ್ಣ- ಇಶ್ತರ್ ದೇವತೆಗೆ ಉರುಕ್ ನಗರದಲ್ಲಿ ಈಕೆಯ ದೇವಾಲಯಗಳಿವೆ. ಸುಮಾರು 4.3 ಸಾವಿರ ಕ್ರಿ.ಪೂ. 2300 ವರ್ಷಗಳ ಹಿಂದಿನ ಅಕ್ಕಡಿಯನ್ ಸಾಮ್ರಾಜ್ಯದ ಮುದ್ರೆಗಳಲ್ಲಿ ಈಕೆಯ ಚಿತ್ರಗಳಿವೆ. ಸುಮೇರುವಿನ ಉರುಕ್ ಕಾಲಘಟ್ಟದಲ್ಲಿ ಸುಮಾರು 6 ಸಾವಿರ ವರ್ಷಗಳ ಹಿಂದಿನಿಂದಲೂ ಈಕೆಯನ್ನೂ ಆರಾಧಿಸಿರುವಂತಿದೆ. ಈಕೆ ಎಂಕಿ ಎಂಬ ದೇವರ ಮಗಳು. ತಾಯಿ ಬಗ್ಗೆ ಮಾಹಿತಿ ಇಲ್ಲ. ದುರ್ಗೆಯಂತೆ ಈಕೆಯೂ ಸಿಂಹವಾಹಿನಿ. ಸಿಂಹದ ಬಾಯಿಗೆ ಹಗ್ಗ ಕಟ್ಟಿ, ಅದರ ಮೇಲೆ ಬಲಗಾಲಿಟ್ಟು ಯುದ್ಧ ಶಸ್ತ್ರಗಳನ್ನು ಕೈಯಲ್ಲಿ ಹಿಡಿದು ನಿಂತ ಇನಣ್ಣ ದೇವತೆ ಥೇಟು ದುರ್ಗೆಯೆ. ಸುಮೇರಿಯಾ, ಮೆಸಪೊಟೇಮಿಯಾದ ನೆಲಗಳಲ್ಲಿ ಸ್ತ್ರೀ ದೇವತೆಗಳು ತುಂಬಿ ಹೋಗಿದ್ದಾರೆ. ಸುಮೇರಿಯಾದ ಎನ್ಲಿಲ್ ದೇವತೆಯು ನಣ್ಣ ಎಂಬ ಸೂರ್ಯದೇವತೆಯನ್ನು ಕೊಲ್ಲುತ್ತಿರುವ ಚಿತ್ರಗಳು ಹಲವು ಅರ್ಥಗಳನ್ನು ಒಳಗೊಂಡಿವೆ. ಸ್ತ್ರೀ ದೇವತೆಗಳ ಆಧಿಪತ್ಯವನ್ನು ಅಂತ್ಯ ಮಾಡಲಾಗುತ್ತಿದೆಯೇ? ಅಥವಾ ಸ್ತ್ರೀ ದೇವತೆಗಳನ್ನು ಆರಾಧಿಸುವ ಬುಡಕಟ್ಟುಗಳ ಮೇಲೆ ಇತರ ಬುಡಕಟ್ಟುಗಳ ಪ್ರಾಬಲ್ಯ ಪ್ರಾರಂಭವಾಯಿತೇ? ಈ ರೀತಿಯ ಅನೇಕ ಪ್ರಶ್ನೆಗಳು ಉದ್ಭವವಾಗುತ್ತವೆ. ಇಂದಿನ ಇರಾನಿನ ಬಯಲುಗಳ ನಂತರ ಅದೇ ಸ್ವಭಾವದ ಅತಿ ಹೆಚ್ಚು ದೇವತೆಗಳು ಕಂಡು ಬರುವುದು ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ.

ಪ್ರಾಚೀನ ಗ್ರೀಕ್ ಮತ್ತು ಈಜಿಪ್ಟ್‌ನಲ್ಲಿ ಹಾಥೊರ್ ಎಂಬ ಹಸುವಿನ ತಲೆಯ ದೇವತೆ ಇದ್ದಾಳೆ. ಈಕೆ ಆಕಾಶ ದೇವತೆ. ಆಕಾಶ ದೇವತೆಯಾದ ಹೋರಸ್ ಸೋರಸ್- ಸೂರ್ಯ ಮತ್ತು ಸೂರ್ಯದೇವತೆಯಾದ ರಾ ನ ತಾಯಿ ಎಂಬ ನಂಬಿಕೆಗಳಿವೆ. ಹಸುವಿನ ಕೊಂಬು, ಸೂರ್ಯಚಕ್ರ, ಕೈಯಲ್ಲೊಂದು ದ್ವಿಶೂಲ ರೀತಿಯ ಭರ್ಜಿ ಹಿಡಿದು ನಿಂತ ಚಿತ್ರಗಳು ಅಪಾರ ಪ್ರಮಾಣದಲ್ಲಿವೆ. ಕೃಷಿ ಪ್ರಧಾನ ಮತ್ತು ಪಶುಪಾಲಕ ಸಮಾಜ ಮೂಲಗಳಿಂದ ವಿಕಾಸವಾದ ಸಾಮ್ರಾಜ್ಯಾಡಳಿತಗಳು ಬಹುದೇವತಾರಾಧನೆ, ಸ್ತ್ರೀ ದೇವತಾರಾಧನೆ, ನಿಸರ್ಗ ದೇವತಾರಾಧನೆಗಳಲ್ಲಿ ತೊಡಗಿದ್ದಾರೆ. ಆದರೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಸ್ಟೆಪ್ಪಿ ಹುಲ್ಲುಗಾವಲುಗಳ ಕಡೆಯಿಂದ ಹೊರಟ ಇಂದ್ರ, ವರುಣ ಮುಂತಾದ ಗಂಡು ದೇವತೆಗಳ ಆರಾಧಕ ಪಶುಪಾಲಕರು, ನಗ್ನದೇವತಾರಾಧನೆ, ಜನನಾಂಗ ಸೂಚಕ ವಿಗ್ರಹಾರಾಧನೆಯನ್ನು ಖಂಡತುಂಡವಾಗಿ ವಿರೋಧಿಸಿದ್ದಾರೆ. ಅವುಗಳನ್ನು ಅಶ್ಲೀಲವೆಂದೂ ಆರಾಧನೆ ಮಾಡುವವರನ್ನು ಹೇಗೆ ವಧಿಸಲಾಯಿತು, ಹೇಗೆ ಶಿಕ್ಷಿಸಬೇಕು ಎಂಬೆಲ್ಲ ಋಕ್ಕುಗಳನ್ನು ಋಗ್ವೇದದಲ್ಲಿ ನೋಡಬಹುದು. ಋಗ್ವೇದದಲ್ಲಿ ಉಷಸ್ ಎಂಬ ದೇವತೆ ಇದ್ದಾಳೆ. ಈಕೆಯನ್ನು ಕೆಲವೊಮ್ಮೆ ಸೂರ್ಯನ ತಾಯಿಯಂತೆ, ಕೆಲವೊಮ್ಮೆ ಸಂಗಾತಿಯಂತೆ ಚಿತ್ರಿಸಲಾಗಿದೆ. ಥೇಟ್ ಇನಣ್ಣ ದೇವತೆಯಂತಹ ಪರಿಕಲ್ಪನೆ ಇದು. ಈ ಸಮರಶೀಲ ಪಶುಪಾಲಕರು ವಲಸೆ ಬಂದು ಸಂಘರ್ಷಕ್ಕಿಳಿದು ಗೆಲುವು ಸಾಧಿಸಿದ ನಂತರ ಸ್ತ್ರೀದೇವತೆಗಳು ನಿಧಾನಕ್ಕೆ ತಮ್ಮ ಪ್ರಭಾವಳಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ. ಪಶ್ಚಿಮ ಏಶ್ಯದ ಬಯಲುಗಳಲ್ಲಿ ಹುಟ್ಟಿದ ಇಂದಿನ ಪ್ರಧಾನ ಧರ್ಮಗಳ ಹಿಂದಿನ ಬಹುತೇಕ ಆಶಯಗಳನ್ನು ಈ ಸ್ಟೆಪ್ಪಿ ಹುಲ್ಲುಗಾವಲುಗಳಿಂದ ಕಡೆಯದಾಗಿ ಬಂದ ಪಶುಪಾಲಕರು ಪ್ರಾರಂಭಿಸಿದ ಹಾಗೆ ಕಾಣುತ್ತದೆ.

 ತಳಿಶಾಸ್ತ್ರ ಮತ್ತು ಪುರಾತತ್ವ ಶಾಸ್ತ್ರಗಳ ಬಹುಪಾಲು ಅಧ್ಯಯನಗಳನ್ನು ಗಮನಿಸಿದರೆ ಕ್ರಿ.ಪೂ. 5 ಸಾವಿರ ವರ್ಷಗಳ ಹಿಂದಿನ ಅಲೆಗಳಲ್ಲಿ ಗಂಡು ಹೆಣ್ಣುಗಳಿಬ್ಬರೂ ವಲಸೆ ಹೊರಟ ಹಾಗೆ ಕಾಣುತ್ತದೆ. ಆ ನಂತರದ ಅಲೆಗಳಲ್ಲಿ ಬಹುಪಾಲು ಗಂಡಸರೇ ಬಂದ ಹಾಗೆ ಕಾಣುತ್ತದೆ. ಉಪಖಂಡದ ಜೀನುಗಳನ್ನು ಗಮನಿಸಿದರೂ ಈ ಅಂಶ ಸ್ಪಷ್ಟವಾಗುತ್ತದೆ. ನಮ್ಮಲ್ಲಿನ ವೈ ಕ್ರೋಮೋಸೋಮುಗಳು ಶೇ 80 ರವರೆಗೆ ಸ್ಟೆಪ್ಪಿ ಹುಲ್ಲುಗಾವಲುಗಳ ಪಶುಪಾಲಕರ ಮೂಲಕ್ಕೆ ಹೋಗುತ್ತವೆ ಮತ್ತು ಅವರಿಗೆ ತಾಳೆಯಾಗುತ್ತವೆ. ತಾಯಿ ಮೂಲವನ್ನು ಹೇಳುವ ಮೈಟೋಕಾಂಡ್ರಿಯಲ್ ಡಿಎನ್‌ಎ ಗಳು ಆಫ್ರಿಕಾದಿಂದ ಬಂದು ನೆಲೆಸಿದ್ದ ತಾಯಿಯವು ಶೇ.80 ರವರೆಗೆ ಇವೆ. ಸ್ಟೆಪ್ಪಿ ಜನರ ಜೀನುಗಳು ವಾಯುವ್ಯ ಮತ್ತು ಉತ್ತರ ಭಾರತೀಯರಲ್ಲಿ ಹೇರಳವಾಗಿವೆ. ದಕ್ಷಿಣಕ್ಕೆ ಬರುತ್ತಿದ್ದಂತೆ ಈ ಪ್ರಮಾಣ ಕಡಿಮೆಯಾಗುತ್ತವೆ. ದಕ್ಷಿಣದ ಮೇಲು ಸ್ತರಕ್ಕೆ ಸೇರಿದ ಜಾತಿಗಳ ಜನರಲ್ಲಿ ತುಸು ದಟ್ಟವಾಗಿವೆ. ಯರೋಪಿನ ಉದಾಹರಣೆಗಳೂ ಇದನ್ನೇ ಹೇಳುತ್ತವೆ. ಗಂಡು ಪ್ರಧಾನ ಸಂಸ್ಕೃತಿಯ ವಾಹಕರು ಬಹುಶಃ ಇದೇ ಕುದುರೆ ಪಳಗಿಸಿಕೊಂಡ ಪಶುಪಾಲಕರೇ ಇರಬೇಕು. ಇವರನ್ನು ಆರ್ಯರೆಂದು ಕರೆಯುವುದು ಹೇಗೆ ಎಂಬ ಪ್ರಶ್ನೆ ತಳಿವಿಜ್ಞಾನ, ಪುರಾತತ್ವಶಾಸ್ತ್ರ ಮತ್ತು ಭಾಷಾಶಾಸ್ತ್ರದ ಅಭ್ಯಾಸಿಗಳಿಗೆ ಹುಟ್ಟುತ್ತದೆ. ಇವರು ಸ್ಟೆಪ್ಪಿಯಿಂದ ಬಂದವರು. ಭಾಷಿಕವಾಗಿ ಇಂಡೋ ಯುರೋಪಿಯನ್ ಭಾಷಾ ಗುಂಪಿಗೆ ಸೇರಿದ್ದಾರೆ. ಆದರೆ ಆರ್ಯಸ್ಥಾನ ಎಂದು ಕರೆಯಲಾಗುವ ಇರಾನಿನ ಬಯಲುಗಳ ಜನರು ಸ್ಟೆಪ್ಪಿ ಜನರಂತಲ್ಲ. ಇರಾನಿನ ಬಯಲಿನ ಆರ್ಯರು ಕೃಷಿ, ನೀರಾವರಿ, ಕೋಟೆ, ಅಣೆಕಟ್ಟು, ರಾಜ್ಯಾಡಳಿತ, ವ್ಯಾಪಾರ ಮತ್ತು ಪಶುಪಾಲನೆಯನ್ನು ಪ್ರಧಾನವಾಗಿ ನಂಬಿಕೊಂಡು ಬದುಕುತ್ತಿದ್ದರು. ಕೃಷಿಯ ಹೆಚ್ಚುವರಿ ಉತ್ಪಾದನೆ, ಆಡಳಿತ ಮತ್ತು ವ್ಯಾಪಾರಗಳು ಇತರ ಸಂಸ್ಕೃತಿಗಳ ಜೊತೆಯಲ್ಲಿ ಸಂಘರ್ಷ ಹಾಗೂ ಸಾಮರಸ್ಯವನ್ನು ಒಟ್ಟಿಗೆ ಬೇಡುತ್ತವೆ. ಜನಾಂಗೀಯ ಹತ್ಯೆಗಳ ಉದ್ದೇಶಗಳು ಆರಂಭದಲ್ಲಿ ಇದ್ದ ಹಾಗೆ ಕಾಣುವುದಿಲ್ಲ. ಆದರೆ ಸ್ಪಾನಿಷರು ಲ್ಯಾಟಿನ್ ಅಮೆರಿಕದ ಅನೇಕ ಭಾಗಗಳ ಗಂಡಸರನ್ನು ಸಾಮೂಹಿಕವಾಗಿ ಕೊಂದು ಹಾಕಿದ್ದು ಲೂಟಿಯ ಉದ್ದೇಶಕ್ಕೆ ಎಂಬುದನ್ನು ಇತಿಹಾಸಕಾರರು ವಿವರಿಸುತ್ತಾರೆ. ಹಿಟ್ಲರನ ಜನಾಂಗೀಯ ಹತ್ಯೆಗಳ ಹಿಂದೆ ಮಾರುಕಟ್ಟೆ ಹಿತಾಸಕ್ತಿ ಇದ್ದಿತಾದರೂ ಶ್ರೇಷ್ಠತೆ ಮತ್ತು ಶುದ್ಧತೆಯ ಹಠಗಳು ಕಾಣಿಸುತ್ತವೆ. ಹಾಗಾಗಿ ಆತ ಸುಮಾರು 52 ಲಕ್ಷ ಯಹೂದಿಗಳನ್ನು ಕೊಂದುಹಾಕಿದ. ಆದರೆ ಅದೇ ಸಮಯದಲ್ಲಿ ಪೂರ್ವ ಮತ್ತು ಉತ್ತರ ಜರ್ಮನಿಗಳ ಬೆಟ್ಟ, ಕಾಡು ಪ್ರದೇಶಗಳಲ್ಲಿ ಕೃಷಿ, ಪಶುಪಾಲನೆ ಮಾಡಿಕೊಂಡು ಬದುಕುತ್ತಿದ್ದ ಒಂದು ಕೋಟಿಗೂ ಹೆಚ್ಚಿನ ಸ್ಲಾವ್ ಬುಡಕಟ್ಟು ಜನರನ್ನೂ ಗುರಿಯಾಗಿಸಿಕೊಂಡು ಕೊಂದು ಹಾಕಿದ. ಇವೆಲ್ಲ ಇತಿಹಾಸದ ಕ್ರೂರ ನೆನಪುಗಳ ಕಾರಣಕ್ಕಾಗಿ, ವರ್ತಮಾನದ ರಾಜಕೀಯಾಧಿಕಾರಗಳಿಗಾಗಿ ನಡೆದ ಹತ್ಯೆಗಳು ಎಂದು ಇತಿಹಾಸಕಾರರು ಬರೆಯುತ್ತಾರೆ.

 ಮೆಕಾಲ್ಪಿನ್ ಎಂಬ ಬಹುಶಿಸ್ತೀಯ ಭಾಷಾಶಾಸ್ತ್ರಜ್ಞನ ಅಧ್ಯಯನಗಳ ಪ್ರಕಾರ ಸಿಂಧೂ ಸಂಸ್ಕೃತಿ ಮತ್ತು ಇರಾನಿನ ಬಯಲುಗಳಲ್ಲಿ ಹರಡಿಕೊಂಡು ಬೆಳೆದ ಸಂಸ್ಕೃತಿಗಳ ನಡುವೆ ವ್ಯಾಪಕ ಪ್ರಮಾಣದ ಕೊಡು-ಕೊಳ್ಳುವಿಕೆಗಳು ನಡೆದಿವೆ. ಸಂಘರ್ಷಗಳು ನಡೆದ ಕುರುಹುಗಳಿಲ್ಲ. ಎರಡೂ ಸಂಸ್ಕೃತಿಗಳ ನಡುವೆ ಕೃಷಿ, ಪಶುಪಾಲನೆ, ವ್ಯಾಪಾರ, ಸಾಮಾಜಿಕ ಸಂರಚನೆ, ಕೋಟೆ ಕೊತ್ತಲುಗಳು, ದೇವಾಲಯಗಳು, ಸ್ತ್ರೀ ಪುರುಷ ದೇವರುಗಳ ವಿಗ್ರಹಗಳು, ಮುಂತಾದವುಗಳಲ್ಲಿ ಅಪಾರ ಸಾಮ್ಯತೆಗಳಿವೆ. ಪಶುಪತಿಯನ್ನು ಹೋಲುವ ವ್ಯಕ್ತಿಗೆ ಎಮ್ಮೆ/ ಕೋಣದ ಬಲಿ ನೀಡುತ್ತಿರುವ ಅನೇಕ ಟೆರ್ರಾಕೋಟ ಚಿತ್ರಗಳು ಸಿಂಧೂ ಕಣಿವೆಯಲ್ಲಿ ದೊರೆತಿವೆ. ಅದೇ ರೀತಿ ಇರಾನಿನ ಬಯಲುಗಳಲ್ಲಿ ನಂತರದ ಕಾಲಘಟ್ಟದಲ್ಲಿ ಮಿತ್ರಾ ಪರಂಪರೆ ಪ್ರಾರಂಭವಾಗಿದೆ. ಈತನನ್ನು ಸೂರ್ಯ, ನ್ಯಾಯ ಮತ್ತು ಯುದ್ಧ ಮತ್ತು ಶಾಂತಿ ಒಪ್ಪಂದಗಳ ದೇವತೆಯನ್ನಾಗಿ ರೊರಾಷ್ಟ್ರಿಯನ್ ಪೂರ್ವ ಕಾಲಘಟ್ಟದಲ್ಲಿ ಗುರುತಿಸಲಾಗುತ್ತದೆ. ಮಿತ್ರನಿಗೆ ಹೋರಿ ಬಲಿಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಆ ಹೋರಿಯ ಭುಜದ ಮೇಲೆ ಗೋಪುರವಿಲ್ಲ. ಮಿತ್ರನೆಂಬ ದೇವತೆ ವೇದಗಳಲ್ಲೂ ಪ್ರಧಾನ ಪಾತ್ರವಾಗಿ ಕಾಣಿಸಿಕೊಳ್ಳುತ್ತಾನೆ. ಬೌದ್ಧ ಪರಂಪರೆಗಳಲ್ಲೂ ಮಿತ್ರನಿದ್ದಾನೆ. ಸ್ಟೆಪ್ಪಿಹುಲ್ಲುಗಾವಲುಗಳಿಂದ ಇರಾನ್, ಆಫ್ಘಾನ್ ಪ್ರದೇಶಗಳ ಮೂಲಕ ಬಂದ ಇಂದ್ರ ಪರಂಪರೆಯ ವೇದ ಕಾಲೀನ ಜನರು ಕತೆಗಳ ಮೂಲಕ ಹಲವು ಸತ್ಯಗಳನ್ನು ಹೇಳುತ್ತಾರೆ. ಇಂದ್ರ ಪುರಂದರ. ಆತ ಕೋಟೆ ಸಂಸ್ಕೃತಿಯನ್ನು, ನಗರ ಸಂಸ್ಕೃತಿಯನ್ನು ಧ್ವಂಸ ಮಾಡಿದವನು. ಶಂಬರ ಸಂಸ್ಕೃತಿಯವರು, ನಾಗಾ ಸಂಸ್ಕೃತಿಯವರು, ದಾಸ ಸಂಸ್ಕೃತಿಗಳಿಗೆ ಶತ್ರುವಾದವನು. ಹರಿವ ನದಿಗೆ ಅಡ್ಡ ಕಟ್ಟಿದ್ದ ಅಣೆಕಟ್ಟೆಯನ್ನು ಒಡೆದು ಹಾಕಿದವನು. ಕುದುರೆ ಸಂಸ್ಕೃತಿಯ ಈತ ಪ್ರಮುಖ ಅಲೆಮಾರಿ ಪಶುಪಾಲಕ. ಇಂದ್ರನೆ ಉಪಖಂಡಕ್ಕೆ ಬಂದು ಬಿಟ್ಟಿದ್ದನೆ ಅಂದರೆ ಆ ರೀತಿಯ ದಾಖಲೆಗಳೇನೂ ಇಲ್ಲ. ಆದರೆ ಇಂದ್ರ- ವರುಣ ಸಂಸ್ಕೃತಿಯಲ್ಲಿ ಹಲವು ಇಂದ್ರರುಗಳಿರಬಹುದೇ ಎಂಬ ಅನುಮಾನಗಳಿವೆ. ಕ್ರಿ.ಪೂ. 3, 4 ಸಹಸ್ರಮಾನಗಳ ಹಿಂದೆ ಯುರೋಪು ಮತ್ತು ಭಾರತದ ಕಡೆಗೆ ಪಶುಮಂದೆಗಳೊಡನೆ ಹೊರಟ ಜನರ ಕತೆಗಳಲ್ಲಿ ಇಂದ್ರನಿದ್ದಾನೆ. ನಾಸತ್ಯರೆಂಬ ಅಶ್ವಿನಿ ದೇವತೆಗಳೂ ಇದ್ದಾರೆ. ಈ ವಿವರಗಳನ್ನು ಈಶಾನ್ಯ ಯುರೋಪಿನ ತುದಿಯಲ್ಲಿರುವ ಲಿಥುವೇನಿಯನ್ನರು ಮತ್ತು ಲಾಟ್ವಿಯನ್ನರು ಹಾಗೂ ಭಾರತದ ಸಂಸ್ಕೃತ ಭಾಷಿಕರ ನಡುವೆ ಇರುವ ಭಾಷಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಅಂಶಗಳ ಆಚರಣೆಗಳಲ್ಲಿನ ಸಾಮ್ಯತೆಗಳ ಮೂಲಕ ಅರ್ಥವಾಗುತ್ತದೆ. ಈ ಸಾಮ್ಯತೆಗಳನ್ನು ನೋಡಿ ನಮ್

Similar News