ತುರ್ತು ಪರಿಸ್ಥಿತಿ ವೇಳೆ ಕಾರಾಗೃಹದಲ್ಲೇ ನಮ್ಮನ್ನು ಮುಗಿಸುವ ಪ್ರಯತ್ನ ನಡೆದಿತ್ತು: ಸಿಎಂ ಯಡಿಯೂರಪ್ಪ
ಬೆಂಗಳೂರು, ಜೂ. 25: `ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮಾಡುವ ಮೂಲಕ ಕರಾಳ ಶಾಸನ ಬರೆದಿರುವ ಕಾಂಗ್ರೆಸ್ ಪಕ್ಷವು ದೇಶದ ಜನತೆಯ ಕ್ಷಮೆಯಾಚಿಸುವ ಮೂಲಕ ತನ್ನ ತಪ್ಪನ್ನು ಇನ್ನಾದರೂ ಒಪ್ಪಿಕೊಳ್ಳಬೇಕು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಶುಕ್ರವಾರ ಇಲ್ಲಿನ ಸಿಎಂ ನಿವಾಸ ಕಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಲವತ್ತೈದು ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಯಾವುದೇ ಕಾರಣ ಇಲ್ಲದೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಕೇವಲ ತನ್ನ ಕುರ್ಚಿ ಉಳಿವಿಗಾಗಿ ಇಂತಹ ಕಠಿಣ ನಿರ್ಧಾರವನ್ನು ಮಾಡಿದ್ದರು. ಇದರಿಂದ ದೇಶದ ಅನೇಕ ನಾಯಕರು ಕಾರಗೃಹ ಶಿಕ್ಷೆ ಅನುಭವಿಸಬೇಕಾಯಿತು' ಎಂದು ಬೇಸರ ವ್ಯಕ್ತಪಡಿಸಿದರು.
'ಜನರಿಗೆ ಇದ್ದ ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ ಕಸಿದುಕೊಳ್ಳಲಾಯಿತು. ನಾವು ಜೈಲುವಾಸ ಅನುಭವಿಸಬೇಕಾಯಿತು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ನಟಿ ಸ್ನೇಹಲತಾ ಜೈಲಿನಲ್ಲಿ ಸಾವನ್ನಪ್ಪಿದ್ದರು. ನಾನು ಸೇರಿದಂತೆ ಅನೇಕ ಕಾರ್ಯಕರ್ತರು ಕಾರಾಗೃಹ ಶಿಕ್ಷೆ ಅನುಭವಿಸಬೇಕಾಯಿತು. ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡೀಸ್, ದೇವೇಗೌಡ ಸೇರಿದಂತೆ ಎಲ್ಲರನ್ನೂ ಬಂಧಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಟ್ಟಿದ್ದರು' ಎಂದು ಅವರು ನೆನಪು ಮಾಡಿಕೊಂಡರು.
`ಕಾರಾಗೃಹದಲ್ಲೇ ನಮ್ಮನ್ನು ಮುಗಿಸುವ ಪ್ರಯತ್ನವೂ ನಡೆದಿತ್ತು. ಅನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜನ ಅವರನ್ನು ತಿರಸ್ಕರಿಸಿದರು. ಈ ದಿನ ಬಿಜೆಪಿಯಿಂದ ಅಂದು ಬಂಧಿತರಾದವರ ಮನೆಗೆ ಹೋಗಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದ ಅವರು, ಕರಾಳ ಶಾಸನ ಜನಜೀವನದ ಮೇಲೆ ಬೀರಿದ ದುಷ್ಪರಿಣಾಮ 46 ವರ್ಷಗಳಾದ ಮೇಲೆಯೂ ಕಾಣುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ದೇಶದ ಜನರಲ್ಲಿ ಕ್ಷಮೆ ಕೇಳುವ ಮೂಲಕ ತನ್ನ ಅಪರಾಧವನ್ನು ಒಪ್ಪಿಕೊಳ್ಳಬೇಕು' ಎಂದು ಆಗ್ರಹಿಸಿದರು.