ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ, ಡಿ.ಕೆ.ಶಿವಕುಮಾರ್ ಗೆ ಅವಕಾಶ ಸಿಗಲಿ: ಎಚ್.ವಿಶ್ವನಾಥ್
Update: 2021-06-25 18:03 IST
ಬೆಂಗಳೂರು, ಜೂ.25: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದಿದ್ದರೂ ಅವರಿಗೆ ಈಗಾಗಲೇ ಮುಖ್ಯಮಂತ್ರಿ ಸ್ಥಾನದ ಅವಕಾಶ ಸಿಕ್ಕಿದೆ. ಹಾಗಾಗಿ, ಡಿ.ಕೆ.ಶಿವಕುಮಾರ್ ಅದೇ ಪಕ್ಷದಲ್ಲಿ ಇದ್ದವರಾಗಿದ್ದು, ಅವರಿಗೊಂದು ಅವಕಾಶ ದೊರೆಯಲಿದೆ ಎಂದು ಬಿಜೆಪಿ ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಬಾರಿ ಸಿದ್ದರಾಮಯ್ಯಗೆ ಅವಕಾಶ ಸಿಕ್ಕಾಗಿದೆ. ಈಗ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಇದ್ದಾರೆ ಎಂದರು. ಝಮೀರ್ ಅಹ್ಮದ್ ಖಾನ್ ಅವರನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮುಂದೆ ಹೋಗುವುದು ಒಳ್ಳೆಯದಲ್ಲ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಆದವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇಂತಹ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದು ಎಂದ ಅವರು, ರಮೇಶ್ ಜಾರಕಿಹೊಳಿ ಅವರ ವಿಚಾರವನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಅದು ಕಾನೂನು ವಿಷಯವಾಗಿದೆ ಎಂದು ತಿಳಿಸಿದರು.