ಸಿಎಂ ಬದಲಾವಣೆ ಬಗ್ಗೆ ಪರೀಕ್ಷೆ ಬರೆದಿದ್ದೇವೆ, ಶೀಘ್ರದಲ್ಲೇ ಫಲಿತಾಂಶ ಬರಲಿದೆ: ಸಚಿವ ಸಿ.ಪಿ.ಯೋಗೇಶ್ವರ್
ಬೆಂಗಳೂರು, ಜೂ. 25: `ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾವೆಲ್ಲ ಪರೀಕ್ಷೆ ಬರೆದಿದ್ದೇವೆ. ಅತೀ ಶೀಘ್ರದಲ್ಲಿ ಫಲಿತಾಂಶ ಪ್ರಕಟವಾಗಲಿದೆ' ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನನ್ನ ವೈಯಕ್ತಿಕ ಸಮಸ್ಯೆ ಹಾಗೂ ರಾಜ್ಯ ಸರಕಾರ ಮತ್ತು ರಾಜ್ಯ ಬಿಜೆಪಿಯ ಮೂಲಭೂತ ಸಮಸ್ಯೆಗಳ ಬಗ್ಗೆ ಹೈಕಮಂಡ್‍ಗೆ ವಿವರಣೆ ನೀಡಿದ್ದೇನೆ. ಸರಕಾರ ಹಾಗೂ ಪಕ್ಷದ ಮೂಲಭೂತ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಿಲ್ಲ' ಎಂದು ತಿಳಿಸಿದರು.
'ಅದೇನೇ ಆಗಲಿ ನಾಯಕತ್ವ ಬದಲಾವಣೆ ಸಂಬಂಧ ಪರೀಕ್ಷೆ ಬರೆಯಲಾಗಿದ್ದು, ಅತೀ ಶೀಘ್ರದಲ್ಲಿ ಫಲಿತಾಂಶ ಪ್ರಕಟವಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 'ಒಬ್ಬ ಜವಾಬ್ದಾರಿ ಸಚಿವನಾಗಿ ನಾನು ನನ್ನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇನೆ. ನನ್ನ ವೈಯಕ್ತಿಕ ನೋವುಗಳು ಹಾಗೂ ಸಮಸ್ಯೆಗಳನ್ನು ನಮ್ಮ ಹೊಸದಿಲ್ಲಿ ನಾಯಕರ ಮುಂದೆ ಹೇಳಿದ್ದೇನೆ. ಪಕ್ಷಕ್ಕೆ ಧಕ್ಕೆ ಉಂಟಾಗಬಾರದು ಹಾಗೂ ಸರಕಾರಕ್ಕೆ ಮುಜುಗರವಾಗಬಾರದು ಎಂಬ ಹಿನ್ನಲೆಯಲ್ಲಿ, ನಾಲ್ಕು ಗೋಡೆಗಳ ಮಧ್ಯೆ ವಿವರಣೆ ನೀಡಿದ್ದೇನೆ' ಎಂದು ಸ್ಪಷ್ಟಪಡಿಸಿದರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಮಾಡಲು ನನಗೆ ತುಂಬಾ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ನಮ್ಮ ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅದು ಬೇಡ, ಇದಕ್ಕೆ ಕೊನೆಯಾಡಬೇಕು. ಈ ವಿಷಯದಲ್ಲಿ ರಾಜಿಯ ಪ್ರಶ್ನೆ ಇಲ್ಲ. ಕರ್ನಾಟಕದಲ್ಲಿ ಅತಿ ಉತ್ತಮವಾದ ಸರಕಾರ ಇರಬೇಕು. ಪಕ್ಷ ಸಂಘಟನೆ ರಾಜ್ಯದ ಇತರ ಭಾಗಗಳಂತೆ ಹಳೇ ಮೈಸೂರು ಭಾಗದಲ್ಲೂ ನಡೆಯಬೇಕು' ಎಂದು ಅವರು ಹೇಳಿದರು.
`ನನಗೆ ಕೋಲಾರ ಜಿಲ್ಲೆ ಉಸ್ತುವಾರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಉಸ್ತುವಾರಿ ನೀಡಲಾಗಿದೆ. ಈ ನಿಟ್ಟಿನಲ್ಲಿ ನನಗೆ ಕೋಲಾರ ಉಸ್ತುವಾರಿ ನೀಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಮುಖ್ಯಮಂತ್ರಿ ವಹಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ' ಎಂದು ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ ನೀಡಿದರು.
ನಾನು ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ 20 ವರ್ಷದ ಸ್ನೇಹಿತರು. ಅವರ ಇತ್ತೀಚಿನ ರಾಜಕೀಯ ನಿಲುವಿನ ಬಗ್ಗೆ ನಾನು ಚರ್ಚಿಸಿಲ್ಲ. ಭೇಟಿಯನ್ನೂ ಮಾಡಿಲ್ಲ. ರಮೇಶ್ ಜಾರಕಿಹೊಳಿ ಅವರು ಮುಂಬೈಗೆ ಹೋಗಿ ರಾಜೀನಾಮೆ ನೀಡುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಅವರ ಪ್ರಚಲಿತ ರಾಜಕೀಯ ನಿರ್ಣಯದ ಬಗ್ಗೆ ಗೊತ್ತಿಲ್ಲ. ರಮೇಶ್ ಜಾರಕಿಹೊಳೆ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ'
-ಸಿ.ಪಿ.ಯೋಗೇಶ್ವರ್, ಪ್ರವಾಸೋದ್ಯಮ ಸಚಿವ