ನನಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡಲ್ಲ: ರಮೇಶ್ ಜಾರಕಿಹೊಳಿ ಎಚ್ಚರಿಕೆ

Update: 2021-06-25 14:49 GMT

ಬೆಳಗಾವಿ, ಜೂ. 25: `ನನ್ನ ಮನಸ್ಸಿಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡುವ ಪ್ರಶ್ನೆಯೇ ಇಲ್ಲ. ಆದರೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಜ. ನಾನು ಮುಂಬೈಗೆ ಹೋಗಿದ್ದರಲ್ಲಿ ರಾಜಕಾರಣವಿದೆ. ಈ ವಿಚಾರದಲ್ಲಿ ಯಾವುದೇ ಮುಚ್ಚು ಮರೆ ಇಲ್ಲ' ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಸುತ್ತೂರು ಮಠದ ಶ್ರೀಗಳ ತಾಯಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಸ್ವಾಮೀಜಿಗಳೊಂದಿಗೆ ಮಾತನಾಡಿದ್ದೇನೆ. ಯಾವುದೇ ರಾಜಕಾರಣದ ಉದ್ದೇಶಕ್ಕೆ ಮಠಕ್ಕೆ ತೆರಳಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಜ. ಅದರಲ್ಲಿ ಎರಡು ಮಾತಿಲ್ಲ. ಈ ವಿಚಾರ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ನನಗೆ ಗೊತ್ತಿಲ್ಲ. ಇನ್ನೂ ಏಳೆಂದು ದಿನಗಳನ್ನು ಬಿಟ್ಟು ಈ ಕುರಿತು ಮಾತನಾಡುತ್ತೇನೆ' ಎಂದು ಸ್ಪಷ್ಟಪಡಿಸಿದರು.

`ಬಿಜೆಪಿ ಪಕ್ಷ, ಸಂಘ ಪರಿವಾರ ಹಾಗೂ ದಿಲ್ಲಿಯ ಹೈಕಮಾಂಡ್ ನನ್ನನ್ನು ಬಹಳ ಪ್ರೀತಿಯಿಂದ ನಡೆಸಿಕೊಂಡಿದೆ. ಕೆಲವೊಂದಿಷ್ಟು ಜನ ಚೂರಿ ಹಾಕಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದು ಆತುರದ ನಿರ್ಧಾರವಲ್ಲ. ನನ್ನ ಸಹೋದರರು ಶಾಸಕರಾಗಿದ್ದಾರೆ. ನನ್ನ ಪುತ್ರರಿದ್ದಾರೆ. ನಮ್ಮ ಮನೆಯಲ್ಲಿ ಇನ್ನೂ ಬಹಳಷ್ಟು ಹುಲಿಗಳಿವೆ. ರಮೇಶ್ ಜಾರಕಿಹೊಳಿ ಮೂಲೆಗುಂಪು ಮಾಡಿದರೆ ಎಲ್ಲವೂ ಮುಗಿದು ಹೋಯಿತು ಎಂದು ನಮ್ಮ ವಿರೋಧಿಗಳು ತಿಳಿದಿರಬಹುದು. ಆದರೆ, ಹತ್ತು ಪಟ್ಟು ಹುಲಿಗಳಿವೆ. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ' ಎಂದು ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡಿದರು.

ಯಾವ ಕಾರಣಕ್ಕೆ ನನಗೆ ಅಸಮಾಧಾನವಿದೆ ಎಂಬುದನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ. ಕೆಲ ತಾಂತ್ರಿಕ ಸಮಸ್ಯೆಗಳಿವೆ. ಕಾನೂನು ತೊಡಕುಗಳಿವೆ. ನನಗೆ ಸಮಯ ಕೊಡಿ. ನಾನು ಮಹರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಲು ಮುಂಬೈಗೆ ತೆರಳಿದ್ದೆ. ಅವರೊಂದಿಗೆ ಸಮಾಲೋಚನೆ ನಡೆಸಿದ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಸರಕಾರ ತಂದವ ನಾನು: `ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುವಷ್ಟು ಸಣ್ಣ ಮನುಷ್ಯ ಅಲ್ಲ. ಆಡಳಿತದಲ್ಲಿದ್ದ ಸರಕಾರವನ್ನು ಮತ್ತೊಂದು ಸರಕಾರ ಅಧಿಕಾರಕ್ಕೆ ತರುವ ಶಕ್ತಿ ನನಗೆ ದೇವರು ನೀಡಿದ್ದಾರೆ. ಮತ್ತೊಬ್ಬರನ್ನು ಮಂತ್ರಿ ಮಾಡುವ ತಾಕತ್ತು ನನಗಿದೆ. ಹೀಗಿರುವಾಗ ನನ್ನನ್ನು ಮಂತ್ರಿ ಮಾಡಿ ಎಂದು ನಾನು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ' ಎಂದು ರಮೇಶ್ ಜಾರಕಿಹೊಳಿ ನುಡಿದರು.

`ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೆವೆ. ಮುಂದೆ ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡುತ್ತಾರೆಯೋ ಕಾದುನೋಡಬೇಕು' ಎಂದ ರಮೇಶ್ ಜಾರಕಿಹೊಳಿ, `ನಾನು ನಾಟಕ ಮಾಡುವ ವ್ಯಕ್ತಿಯಲ್ಲ. ಮಾಧ್ಯಮದ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವ ವ್ಯಕ್ತಿಯೂ ನಾನಲ್ಲ. ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಹೇಳಿದ್ದೇನೆ' ಎಂದು ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂಬುದೆಲ್ಲಾ ಸುಳ್ಳು. ಕಾಂಗ್ರೆಸ್ ಮುಖ್ಯಮಂತ್ರಿ ಮಾಡುತ್ತೇನೆ ಎಂದರೂ ನಾನು ಹೋಗುವುದಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಬಿಜೆಪಿ ಪಕ್ಷದಲ್ಲೇ ಇರುತ್ತೇನೆ. ನನ್ನ 20 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ನಡೆಸಿಕೊಂಡಿದ್ದಕ್ಕಿಂತಲೂ ಚೆನ್ನಾಗಿ ಬಿಜೆಪಿ ಪಕ್ಷ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನಾನು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿ ಪಕ್ಷದಲ್ಲಿಯೇ ನನ್ನ ರಾಜಕೀಯ ಕೊನೆಗೊಳ್ಳಲಿದೆ.

-ಶಾಸಕ ರಮೇಶ್ ಜಾರಕಿಹೊಳಿ (ಮೈಸೂರಿನಲ್ಲಿ ಹೇಳಿಕೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News