ಮೈಸೂರು: ತಂದೆ- ತಾಯಿಯ ಸಾವಿನಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ
ಮೈಸೂರು, ಜೂ.25: ತಂದೆ-ತಾಯಿಯ ಸಾವಿನಿಂದ ಮನನೊಂದು ಮೈಸೂರಿನ ಮೆಡಿಕಲ್ ರೆಪ್ರೆಸೆಂಟೇಟಿವ್ ಉದ್ಯೋಗಿಯೊಬ್ಬರು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಎಸ್.ಕಾರ್ತಿಕ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ತಂದೆ, ತಾಯಿಯನ್ನು ಕಳೆದುಕೊಂಡು ಮನನೊಂದಿದ್ದ ಕಾರ್ತಿಕ್, ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈಗ ಡೆತ್‍ನೋಟ್ ಬರೆದಿಟ್ಟು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿ ಕಾರ್ತಿಕ್ ಉದ್ಯೋಗ ಮಾಡಿಕೊಂಡಿದ್ದ. ಅವರ ತಾಯಿ ಡಾ. ಪಾರ್ವತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ನಂತರ ತಂದೆ ಶಿವಲಿಂಗಯ್ಯ ಮೃತಪಟ್ಟಿದ್ದರು. ಚಿಕ್ಕಮ್ಮನ ಆಸರೆಯಲ್ಲಿ ಎನ್.ಆರ್.ಮೊಹಲ್ಲಾದಲ್ಲಿ ಬಾಡಿಗೆ ರೂಂನಲ್ಲಿ ಕಾರ್ತಿಕ್ ವಾಸವಿದ್ದ. ತನ್ನ ತಾಯಿ ಸಾವನ್ನಪ್ಪಿದ ದಿನವೇ ವಿಷ ಸೇವಿಸಿದ್ದ ಕಾರ್ತಿಕ್, ಬಳಿಕ ತನ್ನ ತಂದೆ ಸಾವನ್ನಪ್ಪಿದ ದಿನ ರೈಲಿನಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.
'ಸ್ನೇಹಿತರೆ ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ. ಇನ್ನು ಮುಂದೆ ನಾನು ನಿಮ್ಮೊಂದಿಗೆ ಇರುವುದಿಲ್ಲ' ಎಂದು ಕಾರ್ತಿಕ್ ಡೆತ್‍ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.