ಶಿವಮೊಗ್ಗ: ಬೆಲೆ ಏರಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೆಡಿಎಸ್ ಪ್ರತಿಭಟನೆ

Update: 2021-06-25 16:07 GMT

ಶಿವಮೊಗ್ಗ, ಜೂ.25: ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್, ವಿದ್ಯುತ್, ರಸಗೊಬ್ಬರ ಹಾಗೂ ದಿನ ನಿತ್ಯದ ವಸ್ತುಗಳ ಬೆಲೆಗಳನ್ನು ಏರಿಸಿ ಜನಸಾಮಾನ್ಯರ ಹಾಗೂ ಮಧ್ಯಮ ವರ್ಗದವರ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕೊರೋನ ಸೋಂಕಿನ ಮೊದಲ ಹಾಗೂ 2ನೇ ಅಲೆಯ ಹರಡುವಿಕೆ ನಿಯಂತ್ರಿಸಲು ದೇಶ ಮತ್ತು ರಾಜ್ಯಾದ್ಯಂತ ವಿಧಿಸಲಾದ ಸಂಪೂರ್ಣ ಲಾಕ್‌ಡೌನ್ ನಿಂದ ಸಂಕಷ್ಟದಿಂದ ಜನರು ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಜನಸಾಮಾನ್ಯರ, ರೈತರ ಮತ್ತು ಕೂಲಿ ಕಾರ್ಮಿಕರ ಹಾಗೂ ದೀನ ದಲಿತರ ಬದುಕಿನ ಮೇಲೆ ಬರೆ ಏಳೆಯುವಂತೆ ಬೆಲೆಗಳನ್ನು ಗಗನಕ್ಕೇರಿಸಿದ್ದು, ಈ ಬೆಲೆ ಏರಿಕೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಲಾಕ್‌ಡೌನ್ ನಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಲ್ಲಿನ ಕುಟುಂಬದ ಮುಖ್ಯಸ್ಥರು, ದುಡಿಯುವ ವ್ಯಕ್ತಿಗಳು ಸಾವನಪ್ಪಿ ಕುಟುಂಬಗಳು ನಿರ್ಗತಿಕರಾಗಿ ಬೀದಿ ಪಾಲಾಗಿದ್ದಾರೆ. ಅಲ್ಲದೇ ಎಷ್ಟೋ ಕುಟುಂಬಗಳಲ್ಲಿ ತಂದೆ-ತಾಯಿಗಳು ಮರಣ ಹೊಂದಿ ಎಳೆ ಮಕ್ಕಳು ಅನಾಥರಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ರೈತರ ಸಮುದಾಯ ತಾನು ಬೆಳೆದ ಆಹಾರ ಸಾಮಗ್ರಿ, ತರಕಾರಿ ಮತ್ತು ಹಣ್ಣು ಹಂಪಲು ಕಟಾವು ಮಾಡಿ ಅದನ್ನು ಸಾಗಿಸಲು ಮತ್ತು ಮಾರಾಟ ಮಾಡಲು ವರ್ತಕರು ಮುಂದೆ ಬರದೇ ಇರುವುದರಿಂದ ಫಸಲನ್ನು ಕೊಳೆಯಲು ಬಿಟ್ಟು ನಿರ್ಗತಿಕರಾಗಿದ್ದಾರೆ. ಇಂತಹ ಸಮಯದಲ್ಲಿ ಬೆಲೆ ಏರಿಕೆಯನ್ನು ಗಗನಕ್ಕೇರಿಸಿ ಆ ವರ್ಗದವರ ಜನ ಜೀವನ ಅಸ್ತವ್ಯಸ್ತ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬೆಲೆ ಏರಿಕೆಯಿಂದ ರಾಜ್ಯದ ಜನತೆ ನರಳುತ್ತಿರುವ ಸಮಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದೆ. ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ವಿಮರ್ಶಿಸಿ ದರ ಏರಿಕೆಯನ್ನು ಹಿಂಪಡೆಯಬೇಕು. ಕೊರೋನ ಸೋಂಕಿನಿಂದ 1 ಮತ್ತು 2ನೇ ಅಲೆಯಲ್ಲಿ ಮೃತರಾದ ಹಾಗೂ ಬಡತನ ರೇಖೆ ಕೆಳಗೆ ಬರುವ ಮೃತ ವ್ಯಕ್ತಿಗಳು ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ಮೃತ ವ್ಯಕ್ತಿಗಳ ಕುಟುಂಬಗಳಿಗೆ ಯಾವುದೇ ಷರತ್ತು ಮತ್ತು ತಾರತಮ್ಯವಿಲ್ಲದೇ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪಕ್ಷದ ವತಿಯಿಂದ ರಾಜ್ಯಮಟ್ಟ ಮತ್ತು ಹೋಬಳಿ ಮಟ್ಟದಲ್ಲಿನ ಸರ್ಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಹಾನಗರಪಾಲಿಕೆ ಸದಸ್ಯ ನಾಗರಾಜ್ಕಂಕಾರಿ, ಮಾಜಿ ಸದಸ್ಯ ಹೆಚ್.ಪಾಲಾಕ್ಷಿ, ಮುಖಂಡರಾದ ಹೆಚ್.ಆರ್.ತ್ಯಾಗರಾಜ್, ಕೆ.ಸಿದ್ದಪ್ಪ, ರಿಚರ್ಡ್ ಕ್ವಾಡ್ರಸ್, ಎಸ್.ಕೆ. ಭಾಸ್ಕರ್, ಹೆಚ್.ಕೆ. ಅಬ್ದುಲ್ ವಾಜೀದ್, ಪರಶುರಾಮ್, ಎಸ್.ವಿ. ರಾಜಮ್ಮ, ಎಂ.ಎಸ್.ಸತೀಶ್, ಮಂಜುನಾಥ ನವುಲೆ, ಕವಿತಾ ಶ್ರೀನಿವಾಸ್ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News