ಲಿಂಗ ತಾರತಮ್ಯಕ್ಕೆ ಕೊನೆಯೆಂದು?

Update: 2021-06-27 13:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರ್ವರಿಗೂ ಸಮಾನಾವಕಾಶ ನೀಡಿರುವ ಸಂವಿಧಾನ ನಮ್ಮ ದೇಶದಲ್ಲಿದೆ.ಜಾತಿ, ಭಾಷೆ, ಧರ್ಮ, ಲಿಂಗ ಇದ್ಯಾವುದರ ಆಧಾರದಲ್ಲಿ ಪಕ್ಷಪಾತ ಮಾಡಕೂಡದೆಂದು ರಾಜ್ಯಾಂಗ ಸ್ಪಷ್ಟವಾಗಿ ಹೇಳುತ್ತದೆ. ಆದರೆ ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ. ಸ್ವಾತಂತ್ರ್ಯದ ಏಳು ದಶಕಗಳು ಗತಿಸಿದ ನಂತರವೂ ಸಂವಿಧಾನದ ಸಮಾನಾವಕಾಶದ ಪರಿಕಲ್ಪನೆ ಸಾಕಾರಗೊಂಡಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ. ಅದರಲ್ಲೂ ಮಾತೆಯೆಂದು ನಾವೆಲ್ಲ ಗೌರವಿಸುವ ಮಹಿಳೆಯರ ಪ್ರಶ್ನೆಯಲ್ಲಿ ನಮ್ಮ ಸಮಾಜದ ನಡೆ ಮಾನವೀಯವಾಗಿಲ್ಲ ಎಂಬುದು ಕಹಿಯಾದರೂ ಕಟು ಸತ್ಯ.

ಪುರುಷಾಧಿಪತ್ಯದ ಸಮಾಜ ನಮ್ಮದು. ಮಹಿಳೆಯನ್ನು ದೇವತೆಯಾಗಿ ಪೂಜಿಸುವ ನೆಲದಲ್ಲೇ ಹೆಣ್ಣು ಭ್ರೂಣ ಹತ್ಯೆಯ ಮೂಲಕ ಗರ್ಭದಲ್ಲೇ ಆ ಜೀವವನ್ನು ಸಾಯಿಸುವ ಕ್ರೌರ್ಯಕ್ಕೆ ಈ ವರೆಗೆ ಕಡಿವಾಣ ಹಾಕಲು ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮವಾಗಿ ಹೆಣ್ಣು ಮಕ್ಕಳ ಪ್ರಮಾಣ ಕುಸಿಯುತ್ತಿದೆ. ಅದರಲ್ಲೂ ಪಂಜಾಬ್, ಹರ್ಯಾಣದಂತಹ ರಾಜ್ಯಗಳು ಈ ಪೈಶಾಚಿಕತೆಗೆ ಹೆಸರಾಗಿವೆ. ಈ ಹೇಯ ಪ್ರವೃತ್ತಿ ದಕ್ಷಿಣ ಭಾರತದಲ್ಲೂ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. 2007ರಿಂದ 2016 ರ ವರೆಗಿನ ಮಾಹಿತಿಯನ್ನು ಆಧರಿಸಿ ಭಾರತದ ರಿಜಿಸ್ಟ್ರಾರ್ ಜನರಲ್ ಅವರು ಸಿದ್ಧಪಡಿಸಿದ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿಯಾಗಿವೆ. ಲಿಂಗ ತಾರತಮ್ಯದ ವಿಷಯದ ಕುರಿತ ಅಂತರ್‌ರಾಷ್ಟ್ರೀಯ ಸೂಚ್ಯಂಕದಲ್ಲೂ ಭಾರತದ ಸ್ಥಾನ ಕುಸಿದಿದೆ. 156 ದೇಶಗಳ ಪಟ್ಟಿಯಲ್ಲಿ ಭಾರತ 140ಕ್ಕೆ ಕುಸಿದಿದೆ. ದಕ್ಷಿಣ ಏಶ್ಯದ ಅತ್ಯಂತ ಕಳಪೆ ಸಾಧನೆ ತೋರಿಸಿದ ಮೂರು ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ಮಹಿಳೆಯರು ತಮಗೆ ದೊರೆತ ಅವಕಾಶಗಳಲ್ಲಿ ಅದ್ಭುತ ಸಾಧನೆ ಮಾಡಿರುವ ನೂರಾರು ಉದಾಹಣೆಗಳಿವೆ. ಆದರೆ ಅವಕಾಶವನ್ನೇ ನೀಡದಿದ್ದರೆ ಅವರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಹೇಗೆ ಸಾಧ್ಯವಾಗುತ್ತದೆ? ಮೀಸಲಾತಿ ಇರುವುದರಿಂದಾಗಿ ಸ್ಥಳೀಯ ಸಂಸ್ಥೆಗಳ ದ್ವಾರಗಳು ಮಹಿಳೆಯರಿಗೆ ಮುಕ್ತವಾಗಿ ತೆರೆದಿವೆ. ಆದರೆ ವಿಧಾನಸಭೆ ಹಾಗೂ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮೀಸಲು ವ್ಯವಸ್ಥೆ ಜಾರಿಗೆ ಬಂದಿಲ್ಲದಿರುವುದರಿಂದ ಅಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಂಬಾ ಕಡಿಮೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಶ್ನೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಇನ್ನೂ ಒಮ್ಮತ ಮೂಡದಿರುವುದರಿಂದ ಮಹಿಳಾ ಮೀಸಲಾತಿ ಕುರಿತ ವಿಧೇಯಕ ಕಡತಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿದೆ.

ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದರೂ ವೇತನ ನೀಡುವಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ಕೋವಿಡ್ ಎರಡೂ ಅಲೆಗಳು ಅಪ್ಪಳಿಸಿದ ನಂತರ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಹಲವಾರು ಸಮೀಕ್ಷಾ ವರದಿಗಳಿಂದ ತಿಳಿದು ಬರುತ್ತದೆ. ಕೇಂದ್ರ ಸರಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ದಂತಹ ಯೋಜನೆ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಕೈಗೊಂಡಿದ್ದರೂ ಲಿಂಗಾನುಪಾತದ ಪರಿಸ್ಥಿತಿ ಇನ್ನೂ ಬದಲಾಗಿಲ್ಲ.

ಕೋವಿಡ್ ಲಸಿಕೆ ನೀಡುವಲ್ಲೂ ಲಿಂಗ ಅಸಮಾನತೆ ಉಂಟಾಗಿದೆ. ಲಸಿಕೆಯನ್ನು ಪಡೆಯುವಲ್ಲೂ ಪುರುಷರಿಗಿಂತ ಮಹಿಳೆಯರು ಹಿಂದೆ ಉಳಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ದಿಲ್ಲಿಗಳಲ್ಲಿ ಲಸಿಕೆ ನೀಡುವಲ್ಲಿ ಈ ಅಸಮಾನತೆ ಎದ್ದು ಕಾಣುವಂತಿದೆ. ಆದರೆ ಕೇರಳ, ಛತ್ತೀಸಗಡ ರಾಜ್ಯಗಳು ಈ ನಿಟ್ಟಿನಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿವೆ. ಈ ಎರಡೂ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದ ಸಾಧನೆ ಕೂಡ ಪ್ರಶಂಸನೀಯವಾಗಿದೆ.

ಲಸಿಕೆ ನೀಡುವಲ್ಲಿನ ಅಸಮಾನತೆಗೆ ಹಲವಾರು ಕಾರಣಗಳಿವೆ. ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಲೋಪ. ಪುರುಷರು ಕೆಲಸಕ್ಕೆ ಹೊರಗೆ ಹೋಗುತ್ತಾರೆ. ಕಾರಣ ಅವರ ಆರೋಗ್ಯ ಪಾಲನೆ ಮುಖ್ಯ. ಅದನ್ನು ಕಾಪಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಮನೋಭಾವ ನಮ್ಮ ಸಮಾಜದಲ್ಲಿದೆ. ಮಹಿಳೆಯರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಲಸಿಕೆಯ ಅಗತ್ಯವಿಲ್ಲ ಎಂಬ ಭಾವನೆ ನಮ್ಮ ಸಮಾಜದಲ್ಲಿ ವ್ಯಾಪಕವಾಗಿದೆ. ಹೀಗಾಗಿ ಲಸಿಕೆ ಪಡೆಯುವಲ್ಲೂ ಲಿಂಗ ಅಸಮಾನತೆ ಎದ್ದು ಕಾಣುತ್ತಿದೆ.

ಲಸಿಕೆ ನೀಡುವ ಆರಂಭದ ದಿನಗಳಲ್ಲಿ ಮಹಿಳೆಯರು ಲಸಿಕೆ ಪಡೆಯಲು ಡಿಜಿಟಲ್ ವ್ಯವಸ್ಥೆ ಅಡ್ಡಿಯಾಗಿತ್ತು. ಸ್ಮಾರ್ಟ್ ಫೋನ್ ಹೊಂದಿದವರು ಮಾತ್ರ ಅದರ ಮೂಲಕ ಲಸಿಕೆ ಪಡೆಯಲು ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿತ್ತು. ಆದರೆ ಅನೇಕ ಕಡು ಬಡವರಲ್ಲಿ ಮಾತ್ರವಲ್ಲ, ಕೆಳ ಮಧ್ಯಮವರ್ಗದ ಮಹಿಳೆಯರಲ್ಲೂ ಸ್ಮಾರ್ಟ್ ಫೋನ್ ಇಲ್ಲದಿರುವುದು ಗಮನಕ್ಕೆ ಬಂದಾಗ, ನೋಂದಣಿ ಮಾಡದೆಯೂ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಹಾಕಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿದ ಆನಂತರ ಪರಿಸ್ಥಿತಿ ಕೊಂಚ ಸುಧಾರಣೆಯಾಗಿದೆ.

ಕೋವಿಡ್ ಲಸಿಕೆಯನ್ನು ನೀಡಲು ಆರಂಭಿಸಿದಾಗ ಜನಸಾಮಾನ್ಯರಲ್ಲಿ ಅದರ ಬಗ್ಗೆ ಸಾಕಷ್ಟು ತಪ್ಪುಕಲ್ಪನೆಗಳಿದ್ದವು. ಈಗ ಅಂತಹ ಭೀತಿ ಕೊಂಚ ಕಡಿಮೆಯಾಗಿದೆಯಾದರೂ ಎಲ್ಲರಿಗೂ ನೀಡುವಷ್ಟು ಲಸಿಕೆಯ ಸಂಗ್ರಹ ಸರಕಾರದ ಬಳಿ ಇಲ್ಲದಂತಾಗಿದೆ. ಈ ಅವ್ಯವಸ್ಥೆಯನ್ನು ಸರಕಾರ ಸರಿಪಡಿಸಿಕೊಳ್ಳಬೇಕು. ಮಹಿಳೆಯರು ತಾವಾಗಿಯೇ ಬಂದು ಲಸಿಕೆ ಪಡೆಯುವಂತೆ ಮಾಡುವಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಸರಕಾರ ಪಡೆಯಬೇಕು. ಈ ಆಶಾ ಕಾರ್ಯಕರ್ತೆಯರನ್ನು ವಾರಿಯರ್ಸ್ ಎಂದು ಹೊಗಳಿದರೆ ಸಾಲದು ಅವರ ಸಂಬಳ, ಭತ್ತೆಗಳನ್ನು ಹೆಚ್ಚಿಸಿ ಸಕಾಲದಲ್ಲಿ ಪಾವತಿ ಮಾಡಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸಮಾಜ ಬದಲಾವಣೆಗೆ ತೆರೆದುಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡಬೇಕು. ಭ್ರೂಣದಲ್ಲೇ ಹೆಣ್ಣನ್ನು ಹೊಸಕಿ ಹಾಕುವ ಕ್ರೌರ್ಯವನ್ನು ಉಗ್ರ ದಂಡನೆಯ ಮೂಲಕ ತಡೆಗಟ್ಟಬೇಕು. ಭ್ರೂಣ ಹತ್ಯೆ ಮಾಡುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮಗಳನ್ನು ಕೈಗೊಂಡರೆ ಸಾಲದು, ಸಮಾಜದ ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳ ನೇತಾರರು ಕೂಡಾ ಲಿಂಗ ಅಸಮಾನತೆಯನ್ನು ತೊಡೆದು ಹಾಕಲು ಪ್ರಮುಖ ಪಾತ್ರವನ್ನು ವಹಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News