10 ಲಕ್ಷ ರೂ. ಹಣದ ಕಂತೆ ಪ್ರದರ್ಶಿಸಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ

Update: 2021-06-25 18:11 GMT

ಹಾಸನ, ಜೂ.25: ಅರಸೀಕೆರೆ ನಗರಸಭೆಯಲ್ಲಿ ಆಯ್ಕೆಗೊಂಡಿರುವ ಜೆಡಿಎಸ್ ಸದಸ್ಯರಿಗೆ ಹಣದ ಆಮಿಷ ಒಡ್ಡಿ ಮುಂಗಡವಾಗಿ 10 ಲಕ್ಷ ರೂ.ಗಳನ್ನು ನೀಡಿರುವ ಬಗ್ಗೆ ಕೂಡಲೇ ಸಿಬಿಐ ತನಿಖೆ ಮಾಡಬೇಕು. ಮುಖ್ಯಮಂತ್ರಿ ಶೀಘ್ರದಲ್ಲಿ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ 10 ಲಕ್ಷ ರೂ. ಬಂಡಲ್ ಇಟ್ಟು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ರೇವಣ್ಣ, ''ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅರಸೀಕೆರೆ ನಗರಸಭೆಯ ಅಧಿಕಾರ ಭದ್ರಪಡಿಸಿಕೊಳ್ಳಲು ಅರಸಿಕೇರೆ ವಿಧಾನಸಭೆಗೆ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಹಣ ಹಂಚುತ್ತಿದ್ದಾನೆ'' ಎಂದು ಆರೋಪಿಸಿದರು.

ಸಿಕಂದರ್ ಮತ್ತು ಹರ್ಷವರ್ಧನ್ ಮೂಲಕ ಎಲ್ಲ ನಗರಸಭೆ ಸದಸ್ಯರಿಗೆ 10 ಲಕ್ಷ ರೂ. ಮುಂಗಡ ಹಣ ಕೊಟ್ಟು ಉಳಿದ 15 ಲಕ್ಷ ರೂ. ನಂತರ ಕೊಡುವುದಾಗಿ ಆಮಿಷ ಒಡ್ಡುವ ಮೂಲಕ ರಾಜೀನಾಮೆ ಕೊಡಿಸಿದ್ದಾರೆ. ನಾಮಪತ್ರ ವಾಪಸ್ ಪಡೆದ ಒಬ್ಬ ಸದಸ್ಯರ ಮನೆ ಬಳಿ ಬಿಜೆಪಿ ಪಕ್ಷದ ಬೆಂಬಲಿಗರು ರಾತ್ರಿ ಗಲಾಟೆ ಮಾಡಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿದರು.

ಜೆಡಿಎಸ್ ಬಿಟ್ಟು ಬರಲ್ಲ ಅಂದರೂ ಒತ್ತಾಯದಲ್ಲಿ ಸದಸ್ಯರ ಮನೆಯಲ್ಲಿ ಸಿಕಂದರ್ 10 ಲಕ್ಷ ರೂ. ಇಟ್ಟು ಬಂದಿದ್ದಾರೆ. ಈ ಹಣ ಎಲ್ಲಿಂದ ಬಂತು. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು. ಈ ಬಗ್ಗೆ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತೇವೆ. ಮುಖ್ಯಮಂತ್ರಿಯ ಕೆಲವು ದೌರ್ಬಲ್ಯವನ್ನು ಹಿಡಿದುಕೊಂಡು ಬ್ಲಾಕ್ ಮೇಲ್ ಮಾಡಿ ಅರಸೀಕೆರೆ ಎಸ್ಟಿ ಮೀಸಲಾತಿ ತಂದಿದ್ದಾನೆ ಎಂದು ಹೇಳಿದರು.

ನಾನು ಈ ಪ್ರಕರಣವನ್ನು ಸುಪ್ರೀಂಕೋರ್ಟ್‌ಗೆ ತೆಗೆದುಕೊಂಡು ಹೋಗುತ್ತೇನೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ನೇರ ಹೊಣೆ. ಕೂಡಲೇ ಸಂತೋಷ್ ಮೊಬೈಲ್ ವಶಪಡಿಸಿಕೊಂಡು ತನಿಖೆ ಮಾಡಲಿ ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯರು ಮಾತನಾಡಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಬೆಂಬಲಿಗನಾದ ಸಿಕಂದರ್ ಎಂಬವನು ಸರಕಾರ ನಮ್ಮ ಕೈಯಲ್ಲಿದೆ. ನಾವು ಏನು ಬೇಕಾದರೂ ಮಾಡಿಸುತ್ತೇವೆ ಎಂದು ಬೆದರಿಸಿದ್ದಾನೆ ಎಂದು ಆರೋಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News