×
Ad

ಡಿಸಿಗಳ ಸಭೆ ಕರೆದು ಲಸಿಕೆ ಕೊರತೆಯ ಕಾರಣ ಕುರಿತು ಪರಿಶೀಲಿಸಲು ಸಿಎಂಗೆ ಸಿದ್ದರಾಮಯ್ಯ ಒತ್ತಾಯ

Update: 2021-06-25 23:46 IST

ಬೆಂಗಳೂರು, ಜೂ.25: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಇಳಿಕೆಯ ಹಾದಿಯಲ್ಲಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಎಲ್ಲ ರಾಜ್ಯಗಳ ಸಿಎಂಗಳ ಸಭೆ ನಡೆಸಿ ಲಸಿಕೆ ನೀಡಿಕೆಯ ಕಾರ್ಯಕ್ರಮ ಪರಿಶೀಲನೆ ನಡೆಸಬೇಕು ಹಾಗೂ ಸಿಎಂ ಬಿಎಸ್‍ವೈ ತಕ್ಷಣ ಡಿಸಿಗಳ ಸಭೆ ಕರೆದು ಲಸಿಕೆ ಕೊರತೆಯ ಕಾರಣದ ಬಗ್ಗೆ ಪರಿಶೀಲಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.   

ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ ಅವರು, ಸದ್ಯ ಮೈಸೂರು, ಧಾರವಾಡ, ಉಡುಪಿ ಜಿಲ್ಲೆಗಳು ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪೂರೈಕೆ ಇಲ್ಲದೆ ಹಾಹಾಕಾರ ಎದ್ದಿದೆ. ಪ್ರಧಾನಮಂತ್ರಿಗಳ ಪ್ರಚಾರ ವೈಭವದ ಲಸಿಕೋತ್ಸವದ ನಂತರದಲ್ಲಿ ಲಸಿಕೆ ಪಡೆದವರ ಸಂಖ್ಯೆ ಕುಸಿಯುತ್ತಾ ಬಂದಿದೆ. ಹೀಗಾಗಿ ಬಿಎಸ್‍ವೈ ಅವರು ಲಸಿಕೆ ಕೊರತೆಯ ಬಗ್ಗೆ ಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ.  

ಜೂ.21ರಂದು ರಾಜ್ಯದಲ್ಲಿ ನೀಡಿರುವ ಕೊರೋನ ಲಸಿಕೆಯ ಸಂಖ್ಯೆ-5,78,841 ಈ ಸಂಖ್ಯೆ ಕಡಿಮೆಯಾಗುತ್ತಾ ಬಂದು ಜೂ.24ರಂದು 2,89,581ಕ್ಕೆ ಇಳಿದಿದೆ. ಜಿಲ್ಲೆಗಳಿಂದ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ಕೆಲವು ತಾಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಕಳೆದೆರಡು ದಿನಗಳಿಂದ ಲಸಿಕೆ ಪೂರೈಕೆಯಾಗಿಲ್ಲ ಎಂದು ಹೇಳಿದರು. 

ಔಷಧಿ ಇಲ್ಲದ ಕೊರೋನ ಸೋಂಕಿಗೆ ಸದ್ಯ ಲಸಿಕೆಯೇ ಸಂಜೀವಿನಿ. ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಕೇಂದ್ರ ಸರಕಾರವೇ ಜವಾಬ್ದಾರಿ ವಹಿಸಿಕೊಂಡಿದೆ. ಈಗ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಲಸಿಕೋತ್ಸವದ ಪ್ರಚಾರ ವೈಭವ ಮಾತ್ರ ನಿಂತಿಲ್ಲ. ಅವರನ್ನು ಪ್ರಶ್ನಿಸುವ ಧೈರ್ಯ ರಾಜ್ಯದ ಬಿಜೆಪಿ ಸರಕಾರಕ್ಕೂ ಇಲ್ಲ ಎಂದು ಕಿಡಿಕಾರಿದ್ದಾರೆ. 

ಮುಖ್ಯಮಂತ್ರಿಯವರು ತಕ್ಷಣ ಜಿಲ್ಲಾಧಿಕಾರಿಗಳ ಸಭೆ ಕರೆದು ಲಸಿಕೆ ನೀಡಿಕೆಯಲ್ಲಿನ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲೆಗಳಿಗೆ ಕಳಿಸಿ ಅಲ್ಲಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News