ಅಧಿಕ ಬಡ್ಡಿ ಆಮಿಷವೊಡ್ಡಿ ಕೋಟ್ಯಂತರ ರೂ. ವಂಚನೆ: ಮೈಲಾರಿ ಅಗ್ರೋ ಪ್ರೊಡಕ್ಟ್ ವ್ಯವಸ್ಥಾಪಕ ನಿರ್ದೇಶಕ ಬಂಧನ
ಬೆಂಗಳೂರು, ಜೂ. 27: ಅಧಿಕ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ಗಳ ವಂಚನೆ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಮೈಲಾರಿ ಆಗ್ರೋ ಪ್ರೊಡಕ್ಟ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಮಹೇಶ್‍ನನ್ನು ಬಂಧಿಸುವಲ್ಲಿ ವಿಧಾನಸೌಧ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಮಹೇಶ್‍ನನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಹಣ ಹೂಡಿಕೆ ಮಾಡಿ ವಂಚನೆಗೀಡಾಗಿದ್ದ ಜೆಪಿ ನಗರದ ಮಹೇಶ್ ಎಂಬುವರು ದೂರು ನೀಡಿದ್ದರು. ಅದರನ್ವಯ ಭರತ, ಮಹೇಶ್, ಪ್ರಕಾಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಆರೋಪಿ ಭರತ್ ಸಾವನ್ನಪ್ಪಿದ್ದು ಇನ್ನೊಬ್ಬ ಆರೋಪಿ ಪ್ರಕಾಶ್ ಪಾತ್ರ ಪ್ರಕರಣದಲ್ಲಿ ಕಂಡುಬಂದಿಲ್ಲ. ತಾನೇ ಕಂಪೆನಿ ಸೃಷ್ಟಿಸಿಕೊಂಡಿದ್ದ ಆರೋಪಿ ಮಹೇಶ್, ಇತರರನ್ನು ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದ. ಆದರೆ, ಕಂಪೆನಿ ಬಗ್ಗೆ ನಿರ್ದೇಶಕರಿಗೆ ಯಾವುದೇ ಮಾಹಿತಿಯನ್ನು ಮಹೇಶ್ ತಿಳಿಸುತ್ತಿರಲಿಲ್ಲ ಎನ್ನುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ವಂಚನೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಪೀಣ್ಯ ನಿವಾಸಿ ಮಹೇಶ್‍ನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿಸಿದರು.
2.50 ಕೋಟಿ ರೂ. ವಂಚನೆ: 10 ಸಾವಿರ, 25 ಸಾವಿರ, 50 ಸಾವಿರ ಹಾಗೂ 1 ಲಕ್ಷ ಮೊತ್ತದ ಹೂಡಿಕೆ ಯೋಜನೆಗಳನ್ನು ಕಂಪೆನಿಯಿಂದ ರೂಪಿಸಲಾಗಿತ್ತು. ಬೆಂಗಳೂರು, ತುಮಕೂರು, ಮೈಸೂರು ಹಾಗೂ ರಾಜ್ಯದ ಹಲವು ಜಿಲ್ಲೆಗಳ ಜನ ಹಣ ಹೂಡಿಕೆ ಮಾಡಿರುವ ಮಾಹಿತಿ ಇದ್ದು ಸುಮಾರು 2.50 ಕೋಟಿಯಷ್ಟು ವಂಚನೆಯಾಗಿರುವುದಕ್ಕೆ ಸದ್ಯ ದಾಖಲೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.