×
Ad

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರೈಲು ವೇಗ ಮಿತಿಗೊಳಿಸಲು ಕೋರಿ ಅರ್ಜಿ: ರೈಲ್ವೆ ಇಲಾಖೆಗೆ ಹೈಕೋರ್ಟ್ ನೋಟಿಸ್

Update: 2021-06-27 19:08 IST

ಬೆಂಗಳೂರು, ಜೂ. 27: ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗಿರುವ ರೈಲ್ವೆ ಮಾರ್ಗಗಳಲ್ಲಿ ರೈಲುಗಳ ವೇಗವನ್ನು ಕಡಿಮೆಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರೈಲ್ವೆ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.

ಹೊಸಪೇಟೆ-ವಾಸ್ಕೋ ಹಾಗೂ ಲೋಂಡಾ-ಮೀರಜ್ ಮಾರ್ಗಗಳು ಧಾರವಾಡ, ಬೆಳಗಾವಿ, ಹಳಿಯಾಳ ಹಾಗೂ ದಾಂಡೇಲಿ ಸಂರಕ್ಷಿತ ಅರಣ್ಯಗಳ ನಡುವೆ ಹಾದು ಹೋಗಿದ್ದು, ರೈಲುಗಳು ವೇಗವಾಗಿ ಸಂಚರಿಸುವುದರಿಂದ ಇಲ್ಲಿನ ಪ್ರಾಣಿ-ಪಕ್ಷಿಗಳಿಗೆ ಢಿಕ್ಕಿ ಹೊಡೆಯುತ್ತಿವೆ. ಹೀಗಾಗಿ ರೈಲುಗಳ ವೇಗವನ್ನು ಮಿತಿಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿ ಗಿರಿಧರ್ ಕುಲಕರ್ಣಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಮುಂದಿನ ಒಂದು ತಿಂಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಅರ್ಜಿಯಲ್ಲಿ ಏನಿದೆ: 2014ರಿಂದ ಈವರೆಗೆ ಬೆಳಗಾವಿ, ಧಾರವಾಡ, ದಾಂಡೇಲಿ ಹಾಗೂ ಹಳಿಯಾಳದ ಅರಣ್ಯ ಪ್ರದೇಶಗಳಲ್ಲಿ ರೈಲುಗಳು ಢಿಕ್ಕಿ ಹೊಡೆದ ಪರಿಣಾಮ 60ಕ್ಕೂ ಅಧಿಕ ಪ್ರಾಣಿಗಳು ಸಾವನ್ನಪ್ಪಿವೆ. ಇದರಲ್ಲಿ 2 ಆನೆ, 49 ಕಾಡುಕೋಣ ಸೇರಿ ಕರಡಿ, ಕಾಡುನಾಯಿ, ಕಾಡುಹಂದಿಗಳು, ಜಿಂಕೆಗಳು ಮೃತಪಟ್ಟಿವೆ. ರೈಲುಗಳು ವೇಗವಾಗಿ ಸಂಚರಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ.

2013ರಲ್ಲಿ ಸುಪ್ರೀಂ ಕೋರ್ಟ್ ದೇಶದ ಎಲ್ಲ ದಟ್ಟಾರಣ್ಯಗಳಲ್ಲಿ ರೈಲುಗಳ ವೇಗವನ್ನು ಕಡಿತಗೊಳಿಸಬೇಕು ಎಂದು ರೈಲ್ವೆ ಇಲಾಖೆಗೆ ಆದೇಶ ನೀಡಿದ್ದು, ವೇಗ ಕಡಿಮೆ ಮಾಡದಿದ್ದರೆ ಚಾಲಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆದೇಶಿಸಿದೆ. ಆದರೆ ಆದೇಶ ಪಾಲನೆಯಾಗಿಲ್ಲ. ಹೊಸಪೇಟೆ-ವಾಸ್ಕೋ ಹಾಗೂ ಲೋಂಡಾ-ಮೀರಜ್ ಮಾರ್ಗದಲ್ಲಿ ರೈಲು ಢಿಕ್ಕಿ ಹೊಡೆದು ಪ್ರಾಣಿಗಳು ಸಾವನ್ನಪ್ಪದಂತೆ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರೈಲ್ವೆ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಈ ಮೂಲಕ ಅರಣ್ಯ ಇಲಾಖೆ ವನ್ಯ ಜೀವಿಗಳನ್ನು ಸಂರಕ್ಷಿಸಬೇಕೆನ್ನುವ ಸಂವಿಧಾನದ ವಿಧಿ 48(ಎ) ಹೇಳಿರುವ ಮೂಲಭೂತ ಕರ್ತವ್ಯವನ್ನು ಉಲ್ಲಂಘಿಸಿದೆ.

ವನ್ಯ ಜೀವಿಗಳಿಗೆ ಹಾನಿಯಾಗಬಾರದೆಂದೇ ಬೆಳಗಾವಿ-ಧಾರವಾಡ ಜಿಲ್ಲೆಗಳ ನಡುವಿನ ರೈಲು ಮಾರ್ಗಕ್ಕೆ ಪರ್ಯಾಯವಾಗಿ ಕಿತ್ತೂರು ಮೂಲಕ ಹಾದು ಹೋಗುವ ಮಾರ್ಗವನ್ನು ರೂಪಿಸಲಾಗಿದೆ. ಅಂತೆಯೇ ಹೊಸಪೇಟೆ-ವಾಸ್ಕೋ ಮತ್ತು ಲೋಂಡಾ-ಮೀರಜ್ ಮಾರ್ಗಗಳಿಗೂ ಪರ್ಯಾಯ ಮಾರ್ಗ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿರುವ ಅರ್ಜಿದಾರರು ಈ ಬಗ್ಗೆ ರೈಲ್ವೆ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News