ಭದ್ರಾವತಿ ತಾಲೂಕಿನ ಹಲವೆಡೆ ಕಾಡಾನೆಗಳ ದಾಳಿ: ಅಡಿಕೆ, ಬಾಳೆ, ಮಾವು ಬೆಳೆ ನಾಶ

Update: 2021-06-27 14:36 GMT

ಶಿವಮೊಗ್ಗ,ಜೂ.27: ಭದ್ರಾವತಿ ತಾಲೂಕಿನ ಲಕ್ಕಿನಕೊಪ್ಪ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಶನಿವಾರ ತಡರಾತ್ರಿ ತೋಟಕ್ಕೆ ನುಗ್ಗಿ ಅಡಿಕೆ, ಬಾಳೆ, ಪೇರಲೆ, ಮಾವು, ಹಲಸನ್ನು ನಾಶ ಪಡಿಸಿವೆ.

ಲಕ್ಕಿನಕೊಪ್ಪದ ತೋಟ, ಗದ್ದೆಗಳ ಮೇಲೆ ತಡರಾತ್ರಿ ಆನೆಗಳು ದಾಳಿ ಮಾಡಿವೆ. ಬಾಳೆ ಗಿಡ, ಅಡಿಕೆ ಮರಗಳು ಬುಡಮೇಲಾಗಿವೆ. ಆನೆಗಳ ದಾಳಿಯಿಂದಾಗಿ ಲಕ್ಕಿನಕೊಪ್ಪ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ: ಭದ್ರಾ ಅಭಯಾರಣ್ಯದಿಂದ ಆನೆಗಳು ಈ ಭಾಗಕ್ಕೆ ಬಂದಿವೆ. ಭದ್ರಾ ಹಿನ್ನೀರು ದಾಟಿ ಮಾರಿದಿಬ್ಬದ ಕಡೆಯಿಂದ ಬಂದಿರುವ ಆನೆಗಳು, ಉಂಬ್ಳೆಬೈಲು ಅರಣ್ಯ ವಲಯ ವ್ಯಾಪ್ತಿಯ ಹಳ್ಳಿಗಳಲ್ಲಿ ದಾಳಿ ಮಾಡುತ್ತಿವೆ. ಬೆಳೆಯನ್ನು ನಾಶ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಆನೆಗಳು ಕಾಕನ ಹಸೂಡಿ, ಉಂಬ್ಳೆಬೈಲು, ಲಕ್ಕಿನಕೊಪ್ಪದ ವಿವಿಧೆಡೆ ನಿರಂತರ ಸಂಚರಿಸುತ್ತಿದ್ದು, ಇದು ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ.

ಅಭಯಾರಣ್ಯಕ್ಕೆ ಅಟ್ಟುವ ಕಾರ್ಯ ವಿಫಲ: ಉಂಬ್ಳೆಬೈಲು ವಲಯ ವ್ಯಾಪ್ತಿಯ ಗ್ರಾಮಗಳ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಗಳ ಉಪಟಳ ತಡೆಯಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಸಕ್ರೆಬೈಲಿನಿಂದ ಸಾಕಾನೆಗಳನ್ನು ಕರೆತಂದು, ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಹಿಮ್ಮೆಟ್ಟಿಸುವ ಪ್ರಯತ್ನ ನಡೆದಿತ್ತು. ಆನೆಗಳನ್ನು ಕಾಡಿಗಟ್ಟಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು. ಆದರೆ, ಕಾಡಾನೆಗಳು ಪುನಃ ಪ್ರತ್ಯಕ್ಷವಾಗಿದ್ದು, ತೋಟ, ಗದ್ದೆಗಳ ಮೇಲೆ ದಾಳಿ ಮಾಡುತ್ತಿವೆ. ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಕಳುಹಿಸಲು ನಿರ್ಲಕ್ಷ್ಯ ತೋರಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಆನೆಗಳು ನಾಲ್ಕನೇ ಬಾರಿಗೆ ನನ್ನ ತೋಟದ ಮೇಲೆ ದಾಳಿ ಮಾಡಿವೆ. ನಾಲ್ಕು ಎಕರೆಯಲ್ಲಿ ಬಾಳೆ, ಅಡಿಕೆ ಬೆಳೆದಿದ್ದೇವೆ. ಈಗ ಆನೆಗಳಿಂದಾಗಿ ಬೆಳೆ ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಹೋಗುತ್ತಾರೆ ಬಿಟ್ಟರೆ, ಮತ್ತೇನನ್ನೂ ಮಾಡುವುದಿಲ್ಲ’ ಎನ್ನುತ್ತಾರೆ ರೈತ ಅರುಣ್‌.

ಅಧಿಕಾರಿಗಳು ಸ್ಥಳಕ್ಕೆ ದೌಡು: ಆನೆ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ದಾಳಿ ಮತ್ತು ಬೆಳೆ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News