'ಸಿಎಂ ಬದಲಾವಣೆ ಪರೀಕ್ಷೆ' ಎಂಬ ಯೋಗೇಶ್ವರ್ ಹೇಳಿಕೆ ಬಗ್ಗೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2021-06-27 14:51 GMT

ಧಾರವಾಡ, ಜೂ. 27: `ಕೇಂದ್ರ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ, ಪ್ರಧಾನಿ ತೀರ್ಮಾನಿಸಿದಾಗ ವಿಸ್ತರಣೆಯಾಗುತ್ತದೆ. ರಾಜ್ಯ ಸರಕಾರದ ಶ್ವಾಸಕೋಶ ಸರಿಯಾಗಿದ್ದು ಸಹಜವಾಗಿ ಉಸಿರಾಡುತ್ತಿದೆ. ಮಾತ್ರವಲ್ಲ ತುಂಬಾ ಗಟ್ಟಿಯಾಗಿದೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂಬಂಧ ಪ್ರಧಾನಿ ಮೋದಿ ತೀರ್ಮಾನ ಮಾಡಲಿದ್ದು, ಯಾರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆಂಬುದು ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಗೊತ್ತಾಗುವುದಿಲ್ಲ. ಹೀಗಾಗಿ ನಾನು ಪ್ರತಿಕ್ರಿಯೆ ನೀಡಲು ಬರುವುದಿಲ್ಲ' ಎಂದು ಇದೇ ಸಂದರ್ಭದಲ್ಲಿ ನಿರಾಕರಿಸಿದರು.

ರಾಜ್ಯ ಸರಕಾರದ ಶ್ವಾಸಕೋಶ ಈಗ ಸರಿಯಾಗಿವೆ, ಸಹಜವಾಗಿ ಉಸಿರಾಡುತ್ತಿದೆ. ಶ್ವಾಸಕೋಶಗಳು ತುಂಬಾನೆ ಗಟ್ಟಿಯಾಗಿವೆ. ಹೀಗಾಗಿ ಸರಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ಪಕ್ಷದಲ್ಲಿ ಯಾವುದೇ ಕಚ್ಚಾಟ ಇಲ್ಲ ಎಂದ ಪ್ರಹ್ಲಾದ್ ಜೋಶಿ, ಮೈಸೂರು ಸುತ್ತೂರು ಮಠಕ್ಕೆ ರಾಜಕಾರಣಿಗಳ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎಲ್ಲವನ್ನೂ ರಾಜಕೀಯ ಎಂದರೆ ಹೇಗೆ? ಅದಕ್ಕೆ ನಾವೇನು ಮಾಡಲು ಸಾಧ್ಯ' ಎಂದು ಪ್ರಶ್ನಿಸಿದರು.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಯಾವ ವಿಶ್ವ ವಿದ್ಯಾಲಯದ ಪರೀಕ್ಷೆ ಬರೆದಿದ್ದಾರೋ ಅಲ್ಲೇ ಫಲಿತಾಂಶ ಬರಲಿದೆ. ಅವರು ಪರೀಕ್ಷೆ ಬರೆದ ವಿವಿಯ ಕುಲಪತಿ ಅರುಣ್ ಸಿಂಗ್ ಅವರು ಈಗಾಗಲೇ ಸರಿಯಾದ ಉತ್ತರ ಕೊಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಜೋಶಿ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News