ಫೇಸ್‍ಬುಕ್‍ನಲ್ಲಿ ಪರಿಚಯವಾದ 17 ವರ್ಷದ ಬಾಲಕನನ್ನು ವಿವಾಹವಾದ 20 ವರ್ಷದ ಯುವತಿ

Update: 2021-06-27 16:53 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಜೂ.27: ಫೇಸ್‍ಬುಕ್‍ನಲ್ಲಿ ಪರಿಚಯವಾದ 17 ವರ್ಷದ ಬಾಲಕನನ್ನು 20 ವರ್ಷದ ಯುವತಿಯೊಬ್ಬಳು ವಿವಾಹವಾಗಿರುವ ಘಟನೆಯೊಂದು ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವರದಿಯಾಗಿದ್ದು, ಘಟನೆ ಸಂಬಂಧ ಪೊಲೀಸರು ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು ಮೂಲದ 20 ವರ್ಷದ ಯುವತಿಗೆ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಬಾಲಕನೋರ್ವ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದಾನೆ. ಈ ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದು, ಈ ವಿಚಾರ ಬಾಲಕ ಹಾಗೂ ಯುವತಿಯ ಪೋಷಕರಿಗೆ ತಿಳಿದಾಗ ಇಬ್ಬರಿಗೂ ವಿವಾಹ ಮಾಡಲು ಪ್ರೇಮಿಗಳ ಪೋಷಕರು ಮುಂದಾಗಿದ್ದಾರೆ.

ಅದರಂತೆ ಕಳೆದ ಜೂ.16ರಂದು ಫೇಸ್‍ಬುಕ್ ಪ್ರೇಮಿಗಳಿಬ್ಬರಿಗೂ ಯುವತಿ ಹಾಗೂ ಬಾಲಕನ ಪೋಷಕರು ಬಾಲಕನ ಹುಟ್ಟೂರು ಬ್ರಹ್ಮಸಮುದ್ರ ಗ್ರಾಮದಲ್ಲಿ ವಿವಾಹ ನೆರವೇರಿಸಿದ್ದಾರೆ. 17 ವರ್ಷದ ಬಾಲಕ ಹಾಗೂ 20 ವರ್ಷದ ಯುವತಿಯ ವಿವಾಹ ಸಂಬಂಧ ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಗೂ ಸಖರಾಯಪಟ್ಟಣ ಪೊಲೀಸರು, ಅಂಗನವಾಡಿ ಮೇಲ್ವಿಚಾರಕಿ, ಗ್ರಾಪಂ ಕಾರ್ಯದರ್ಶಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಬ್ರಹ್ಮಸಮುದ್ರ ಗ್ರಾಮದ ಯುವತಿಯ ಮನೆಗೆ ಭೇಟಿ ದೂರಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಯುವತಿ ಮದುವೆಯಾದ ವರನ ವಯಸ್ಸು 17 ಎಂಬುದು ಖಾತ್ರಿಯಾದ ಬಳಿಕ ಯುವತಿ ಸೇರಿದಂತೆ ಆಕೆಯ ಪೋಷಕರು ಹಾಗೂ ಬಾಲಕನ ಪೋಷಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ವಿವಾಹ ಕಾರ್ಯಕ್ರಮಕ್ಕೆ ಅನುಮತಿ ಪಡೆಯದೇ ಮದುವೆ ನೆರವೇರಿಸಿದ ಆರೋಪದ ಮೇರೆಗೆ ಕುಟುಂಬಸ್ಥರ ಮೇಲೆ ಕೋವಿಡ್ ನಿಯಮ ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಯುವತಿಯನ್ನು ವಶಕ್ಕೆ ಪಡೆದಿರುವ ಇಲಾಖಾಧಿಕಾರಿಗಳು ಆಕೆಯನ್ನು ಚಿಕ್ಕಮಗಳೂರು ನಗರದ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News