'ಮುಂದಿನ ಮುಖ್ಯಮಂತ್ರಿ' ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮಾರಕ: ಕೆಪಿಸಿಸಿ ಶಿಸ್ತು ಸಮಿತಿ ಅಭಿಪ್ರಾಯ

Update: 2021-06-27 15:58 GMT

ಬೆಂಗಳೂರು, ಜೂ. 27: `ಇತ್ತೀಚಿನ ದಿನಗಳಲ್ಲಿ ಕೆಲವು ಶಾಸಕರು ತಮ್ಮ ನೆಚ್ಚಿನ ನಾಯಕರನ್ನು `ಮುಂದಿನ ಮುಖ್ಯಮಂತ್ರಿ' ಎಂಬ ರೀತಿಯಲ್ಲಿ ಬಿಂಬಿಸುವಂತೆ ಹೇಳಿಕೆಗಳನ್ನು ನೀಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿ ಪರಿಗಣಿಸುವ ಸಾಧ್ಯತೆಗಳಿವೆ' ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಭಿಪ್ರಾಯಪಟ್ಟಿದೆ.

ರವಿವಾರ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ನೇತೃತ್ವದಲ್ಲಿ ಝೂಮ್ ಮೂಲಕ ನಡೆದ ಕೆಪಿಸಿಸಿ ಶಿಸ್ತು ಸಮಿತಿ ಸಭೆಯಲ್ಲಿ ಕೆಲವು ಶಾಸಕರು ಇತ್ತೀಚೆಗೆ ತಮ್ಮ ನಾಯಕರನ್ನು ಮೆಚ್ಚಿಸಲು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

''ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಕುರಿತು ಈಗಲೇ ಹೇಳಿಕೆಗಳನ್ನು ನೀಡುವುದು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಭಾವಿಸಬೇಕಾಗುತ್ತದೆ. ಶಿಸ್ತು ಸಮಿತಿಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ವಿಚಾರದಲ್ಲಿ ಕೂಲಂಕಷವಾಗಿ ಚರ್ಚೆ ನಡೆಸಬೇಕಾದ ಅಗತ್ಯವು ಇದೆ ಎಂದು ರಹ್ಮಾನ್ ಖಾನ್ ತಿಳಿಸಿದ್ದಾರೆ'' ಎಂದು ಹೇಳಲಾಗಿದೆ.

ಈ ವಿಚಾರವನ್ನು ಶಿಸ್ತು ಸಮಿತಿಯು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದು, ಯಾವ ಯಾವ ಶಾಸಕರು ಈ ವಿಚಾರದಲ್ಲಿ ಯಾವ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆದುದರಿಂದ, ಮುಂದಿನ ವಾರ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ' ಎಂದು ತಿಳಿದು ಬಂದಿದೆ.

'ಮುಂದಿನ ಸಿಎಂ' ಸಂಬಂಧ ಯಾವುದೇ ಹೇಳಿಕೆಗಳನ್ನು ಶಾಸಕರು ನೀಡಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಅದನ್ನು ಪ್ರತಿನಿಧಿಸುವಂತಹ ಶಾಸಕರು ಇಂತಹ ಮಹತ್ವದ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಲು ಅವಕಾಶವಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.

ಮಹತ್ವದ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಆಂತರಿಕವಾಗಿ ಚರ್ಚೆ ಮಾಡಬೇಕು. ಶಾಸಕರು ಬಹಿರಂಗವಾಗಿ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಅನ್ನೋದರ ಬಗ್ಗೆ ಹೇಳಿಕೆಗಳನ್ನು ನೀಡುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಶಾಸಕರು ತಮ್ಮ ಅಭಿಪ್ರಾಯಗಳನ್ನು ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ಅಧ್ಯಕ್ಷರು ಅಥವಾ ರಾಜ್ಯ ಉಸ್ತುವಾರಿಗಳಿಗೆ ತಿಳಿಸಬಹುದೇ ಹೊರತು, ಈ ರೀತಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ಗೊಂದಲಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದು ಹಲವು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ಪಕ್ಷದಿಂದ ನಾವು, ನಮ್ಮಿಂದ ಪಕ್ಷ ಅಲ್ಲ. ಈ ಮಾತನ್ನು ಯಾರೊಬ್ಬರೂ ಮರೆಯಬಾರದು. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಶಿಸ್ತು, ಸಂಪ್ರದಾಯವಿದೆ. ಪಕ್ಷದ ಚಿಹ್ನೆಯಡಿ ಗೆದ್ದಿರುವ ಶಾಸಕರು ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರನ್ನು ರಾಜ್ಯದ ಮೂಲೆ ಮೂಲೆಯಲ್ಲಿರುವ ಕಾರ್ಯಕರ್ತರು ಗಮನಿಸುತ್ತಿರುತ್ತಾರೆ. ಆದುದರಿಂದ, ಎಲ್ಲಿಯೂ ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಸದಸ್ಯರು ಸಲಹೆ ನೀಡಿದ್ದಾರೆ.

'ಸಾಮೂಹಿಕ ನಾಯಕತ್ವದಲ್ಲಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಕಾರ್ಯಕರ್ತರಲ್ಲಿ, ಮತದಾರರಲ್ಲಿ ಗೊಂದಲ ಉಂಟಾಗುವಂತಹ ವಾತಾವರಣ ಸೃಷ್ಟಿಯಾದರೆ ನಾವು ಅವಕಾಶ ವಂಚಿತರಾಗಿ, ಬಿಜೆಪಿ ಲಾಭ ಪಡೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ' ಎಂದು ಕೆಲವು ಸದಸ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News