ಶಾಲೆಗಳ ಪುನರಾರಂಭ ಕುರಿತು ಸೋಮವಾರ ಶಿಕ್ಷಣ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ
ಬೆಂಗಳೂರು, ಜೂ. 27: ರಾಜ್ಯದಲ್ಲಿ `ಶಾಲೆಗಳ ಪುನರಾರಂಭ' ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳು ನಾಳೆ(ಸೋಮವಾರ) ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಜು.1ರಿಂದ ಶಾಲೆಗಳು ಪುನರಾರಂಭ ಆಗಲಿದೆಯೆಂದು ಈ ಹಿಂದೆ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದರು. ಆದರೆ, ಡೆಲ್ಟಾ ಪ್ಲಸ್ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರ ಸಲಹೆ ಪಡೆದ ಬಳಿಕವೇ ಭೌತಿಕ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಯಾವ ಸ್ವರೂಪದಲ್ಲಿ ಶಾಲೆ ಆರಂಭಿಸಬೇಕೆಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಕೋವಿಡ್ ಮೂರನೆ ಅಲೆ ಕುರಿತು ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಶಾಲೆಗಳ ಆರಂಭಕ್ಕೆ ಸಹಮತ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಈ ವರದಿಯನ್ನು ಆಧರಿಸಿ ಶಿಕ್ಷಣ ತಜ್ಞರು, ಸರಕಾರೇತರ ಸ್ವಯಂ ಸಂಸ್ಥೆಗಳ ಮುಖಂಡರೊಂದಿಗೆ ಶಿಕ್ಷಣ ಸಚಿವರು ಸಭೆ ನಡೆಸಿ ಅಭಿಪ್ರಾಯ, ಸಲಹೆ ಪಡೆದಿದ್ದಾರೆ.
ಇದರ ಜತೆಗೆ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿ, ಶಿಕ್ಷಣ ತಜ್ಞರು ಹಾಗೂ ಪೋಷಕರು ಶಾಲೆಗಳನ್ನು ಆರಂಭಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಶಾಲೆಗಳನ್ನು ಪ್ರಾರಂಭಿಸುವುದರ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.