ಕನ್ನಡದ ಹೆಸರುಗಳನ್ನು ಬದಲಾಯಿಸಿದರೆ ಕೇರಳ ಗಡಿ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ
ಮೈಸೂರು,ಜೂ.27: ಕೇರಳ ಸರ್ಕಾರ ಕನ್ನಡದ ಹೆಸರುಗಳನ್ನು ಬದಲಾಯಿಸಿದರೆ ಕೇರಳ ಗಡಿ ಬಂದ್ ಮಾಡಬೇಕಾಗುತ್ತದೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ನಗರದ ಆರ್‍ಗೇಟ್ ವೃತ್ತದಲ್ಲಿ ರವಿವಾರ ಮದ್ಯ ಬೆಲೆ ಏರಿಕೆ ಹಿನ್ನಲೆ ಮದ್ಯ ಪ್ರಿಯರ ಬೆಂಬಲಕ್ಕೆ ನಿಂತು ಪ್ರತಿಭಟನೆ ನಡೆಸಿದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಕೆಲವು ಕನ್ನಡದ ಹೆಸರುಗಳನ್ನು ಬದಲಾಯಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ. ಕೇರಳ ಸರ್ಕಾರ ಇದಕ್ಕೆ ಮುಂದಾದರೆ ಕೇರಳದಿಂದ ಕರ್ನಾಟಕ್ಕೆ ಬರಲು ಬಿಡುವುದಿಲ್ಲ. ಕೇರಳ ಗಡಿಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಹೇಳಿದರು.
ಸರ್ಕಾರ ಮದ್ಯ ಮಾರಾಟ ಮಾಡುವುದನ್ನ ಸಂಪೂರ್ಣ ನಿಲ್ಲಿಸಬೇಕು. ಇಲ್ಲದಿದ್ದರೆ ಕಡಿಮೆ ಬೆಲೆಯಲ್ಲಿ ಮದ್ಯ ನೀಡಬೇಕು. ನಾನು ಮದ್ಯ ಕುಡಿಯೋದಿಲ್ಲ ಆದರೆ ಸಾಂಕೇತಿಕ ಬೆಂಬಲ ನೀಡುತ್ತೇನೆ. ಸರ್ಕಾರ ಮದ್ಯದ ಬೆಲೆ ಕಡಿಮೆ ಮಾಡಿಲಿಲ್ಲ ಅಂದರೆ ಸರ್ಕಾರಕ್ಕೆ ಮದ್ಯ ಅಭಿಷೇಕ ಮಾಡುತ್ತೇವೆ ಎಂದು ಹೇಳಿದರು.
ಒಂದು ತಿಂಗಳ ನಂತರ ಬಿ.ಎಸ್.ಯಡಿಯೂರಪ್ಪ ಸರ್ಕಾರ ಪತನಗೊಳ್ಳಲಿದೆ. ಯಡಿಯೂರಪ್ಪ ಭ್ರಷ್ಟರಲ್ಲೇ ಭ್ರಷ್ಟ ಸಿಎಂ. ಜೈಲಿಗೆ ಹೋಗಿ ಬಂದ ಮೊದಲ ಸಿಎಂ. ವಿಧಾನಸೌಧದಲ್ಲಿ ಭ್ರಷ್ಟರ ಕೂಟವೇ ಇದೆ. ರಾಜಕೀಯ ಕಾರಣಕ್ಕೆ ಇದೀಗ ಬಸವಣ್ಣನವರ ಪುತ್ಥಳಿ ನಿರ್ಮಿಸಲು ಹೊರಟಿದ್ದಾರೆ. ವಿಧಾನಸೌಧದಲ್ಲಿ ಈಗಾಗಲೇ ಬಸವಣ್ಣನವರ ಪುತ್ಥಳಿ ಇದೆ. ಈ ನಡುವೆ ಮತ್ತೊಂದು ಪುತ್ಥಳಿ ನಿರ್ಮಾಣದ ಅವಶ್ಯಕತೆ ಇಲ್ಲ. ಒಬ್ಬ ಭ್ರಷ್ಟ ಸಿಎಂ ವಿಶ್ವಮಾನವ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡುವುದು ಅಪಮಾನ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
ಎನ್‍ಟಿಎಂಎಸ್ ಸರ್ಕಾರಿ ಹೆಣ್ಣು ಮಕ್ಕಳ ಕನ್ನಡ ಶಾಲೆಯನ್ನು ಯಾವುದೇ ಕಾರಣಕ್ಕೂ ಒಡೆಯಬಾರದು. ಕನ್ನಡ ಶಾಲೆ ಉಳಿಯಬೇಕು. ನೂರಾರು ವರ್ಷಗಳ ಇತಿಹಾಸ ಇರುವ ಶಾಲೆ ಮುಚ್ಚಲು ಬಿಡುವುದಿಲ್ಲ. ಕನ್ನಡ ಶಾಲೆ ಉಳಿಸಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲಿ. ಇಲ್ಲದಿದ್ದರೆ ಕರ್ನಾಟಕದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.