ಶೇ. 27 ಭಾರತೀಯರಿಗೆ ಕೊರೋನ ಲಸಿಕೆಯ ಮೊದಲ ಡೋಸ್

Update: 2021-06-27 17:31 GMT

ಡಾರ್ಜಿಲಿಂಗ್, ಜೂ. 27: ಕೋವಿಡ್ ಲಸಿಕೆ ಪಡೆಯಲು ಅರ್ಹರಾದ ಎಲ್ಲಾ ವಯಸ್ಕರಲ್ಲಿ ಶೇ. 27ಕ್ಕಿಂತ ಸ್ಪಲ್ಪ ಹೆಚ್ಚು ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ಶನಿವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಸುಪ್ರೀಂ ಕೋರ್ಟ್ ಗೆ ಶನಿವಾರ ರಾತ್ರಿ ಸಲ್ಲಿಸಲಾದ ಅಫಿಡಾವಿಟ್ನಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ, ಆದ್ಯತೆ ಜನಸಂಖ್ಯೆ (45 ವರ್ಷ ಹಾಗೂ ಅದಕ್ಕಿಂತ ಹೆಚ್ಚು)ಯ ಶೇ. 44.2 ಹಾಗೂ 18-44 ಪ್ರಾಯ ಗುಂಪಿನಲ್ಲಿ ಶೇ. 13 ವಯಸ್ಕರು ತಮ್ಮ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದೆ.

ದೇಶಾದ್ಯಂತ ಪ್ರತಿ 10 ಲಕ್ಷ ಜನರಿಗೆ 2.13 ಲಕ್ಷಕ್ಕೂ ಅಧಿಕ ಜನರು ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಆದರೆ, ಬುಡಕಟ್ಟು ಜಿಲ್ಲೆಗಳಲ್ಲಿ 2.19 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇದು ಆನ್ಲೈನ್ ಪೋರ್ಟಲ್ ಕೋವಿನ್ನಲ್ಲಿ ನೋಂದಣಿ ಕಡ್ಡಾಯ ಮಾಡುವುದರಿಂದ ಡಿಜಿಟಲ್ ವಿಭಜನೆಯಾಗುತ್ತದೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಲಸಿಕೆಗಳು ಲಭ್ಯವಾಗಲು ಕಷ್ಟವಾಗುತ್ತದೆ ಎಂಬ ಕಳವಳವನ್ನು ನಿವಾರಿಸಿದೆ.

ಲಸಿಕೆ ಪಡೆಯಲು ಕೋವಿನ್ ನಲ್ಲಿ ಮುಂಚಿತವಾಗಿ ಸ್ವ-ನೋಂದಣಿ ಹಾಗೂ ಭೇಟಿ ಕಾಯ್ದಿರಿಸುವುದು ಕಡ್ಡಾಯವಲ್ಲ. ಆನ್ ಲೈನ್ ನಲ್ಲಿ ನೋಂದಣಿ ಮಾಡಲು ಸಾಧ್ಯವಾಗದವರಿಗೆ ವಾಕ್-ಇನ್-ನೋಂದಣಿ ಹಾಗೂ ಭೇಟಿ ಸ್ಥಳಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಕೋವಿಡ್ ಹರಡುವುದು ಕ್ಷೀಣಿಸುತ್ತಿದೆ. ಕೋವಿಡ್ ಮತ್ತೆ ಹರಡುವ ಸಾಧ್ಯತೆ ಕೇವಲ ಉಹಾತ್ಮಕವಾಗಿದೆ. ಕೋವಿಡ್ ಹರಡುವಿಕೆಯು ಜನರ ಕೋವಿಡ್ ಸೂಕ್ತ ನಡವಳಿಕೆಯನ್ನು ಅವಲಂಬಿಸಿದೆ ಎಂದು ಅಫಿಡಾವಿಟ್ ಹೇಳಿದೆ.

ಬುಡಕಟ್ಟು ಪ್ರದೇಶಗಳಲ್ಲಿ ಲಸಿಕೀಕರಣ ಕಾರ್ಯಕ್ರಮದ ಯಶಸ್ವಿಯಾಗಿರುವುದನ್ನು ವಿವರಿಸಿರುವ ಅಫಿಡಾವಿಟ್, ಜೂನ್ ವರೆಗೆ 176 ಬುಡಕಟ್ಟು ಜಿಲ್ಲೆಗಳಲ್ಲಿ 97 ಜಿಲ್ಲೆಗಳಲ್ಲಿ ಲಸಿಕೀಕರಣ ನಡೆಸಲಾಯಿತು. ದೇಶದ ಲಸಿಕೀಕರಣಕ್ಕೆ ಹೋಲಿಸಿದರೆ ಬುಡಕಟ್ಟು ಜಿಲ್ಲೆಗಳ ಲಸಿಕೀಕರಣದ ಪ್ರಮಾಣ ಉತ್ತಮವಾಗಿತ್ತು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News