ಶರಾವತಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ: ಸ್ಥಳೀಯರಿಂದ ರಕ್ಷಣೆ
ಶಿವಮೊಗ್ಗ, ಜೂ.27: ಸಿಗಂದೂರು ಲಾಂಚ್ ನಿಂದ ಶರಾವತಿ ನದಿಗೆ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಲಾಂಚ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದಿದ್ದಾರೆ. ಕೂಡಲೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಾವೇರಿ ಜಿಲ್ಲೆ ಹಿರೇಕೆರೂರಿನ ರೇಣುಕಾ (46) ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದು ಮರಳುತ್ತಿದ್ದರು. ಹೊಳೆಬಾಗಿಲು ಕಡೆಯಿಂದ ಕಳಸವಳ್ಳಿ ಕಡೆಗೆ ಹೊರಟಾಗ ರೇಣುಕಾ ಅವರು ಲಾಂಚ್ ಹತ್ತಿದ್ದರು. ಹೊಳೆಯ ಮಧ್ಯೆ ಭಾಗಕ್ಕೆ ಬರುತ್ತಿದ್ದಂತೆ ದಿಢೀರನೆ ಲಾಂಚ್ ನಿಂದ ಜಿಗಿದಿದ್ದಾರೆ. ಮಹಿಳೆಯ ಜಿಗಿಯುತ್ತಿದ್ದಂತೆ ಸ್ಥಳೀಯರಾದ ಪ್ರಕಾಶ್ ಬೆಳಮಕ್ಕಿ ರಕ್ಷಣೆಗೆ ಮುಂದಾಗಿದ್ದಾರೆ. ಇವರಿಗೆ ಲಾಂಚ್ ಸಿಬ್ಬಂದಿ ನೆರವಾಗಿದ್ದಾರೆ.
ಮಹಿಳೆಯ ರಕ್ಷಣೆಗೆ ಮತ್ತು ಪ್ರಕಾಶ್ ಅವರಿಗೆ ಸೇಫ್ಟಿ ಟ್ಯೂಬ್ ಗಳನ್ನು ನೀರಿಗೆ ಹಾಕಲಾಗಿತ್ತು. ಅಲ್ಲದೆ ಲಾಂಚನ್ನು ಮಹಿಳೆ ಬಳಿಗೆ ಕೊಂಡೊಯ್ಯಲಾಯಿತು. ಟ್ಯೂಬ್ ನ ಸಹಾಯ ಮತ್ತು ಪ್ರಕಾಶ್ ಅವರ ನೆರವಿನಿಂದ ರೇಣುಕಾ ಅವರನ್ನು ರಕ್ಷಣೆ ಮಾಡಲಾಗಿದೆ.
ವಿಚಾರ ತಿಳಿದು ಸಾಗರ ಗ್ರಾಮಾಂತರ ಠಾಣೆ ಪೊಲಿಸರು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದಿದ್ದಾರೆ.