ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಉಳಿದಿದೆ, ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ: ಸಿ.ಟಿ.ರವಿ

Update: 2021-06-28 09:55 GMT

ಹೊಸದಿಲ್ಲಿ: ಬಿಜೆಪಿಗೆ ಬಹುಮತವಿರುವುದರಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿಯಲ್ಲಿ ಇನ್ನು ಯಾರಾದರೂ ಮುಖ್ಯಮಂತ್ರಿ ಸ್ಥಾನದ ಕನಸು ಕಂಡರೆ ಅಶ್ಚರ್ಯವೇನಿಲ್ಲ. ಆದರೆ ಕಾಂಗ್ರೆಸ್‌ನವರು ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿ ಆಗಲು ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ದಿಲ್ಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆ ಗಮನಿಸಿದ್ದೇನೆ. ಅಲ್ಪಸಂಖ್ಯಾತರಲ್ಲಿ ನಾವೇ ಶೇಕಡವಾರು ಹೆಚ್ಚಿದ್ದೇವೆ, ನಮಗೇ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಹೇಳಿದ್ದಾರೆ. ಅವರ ಹೆಸರಲ್ಲಿ ಸಿಎಂ ಇದೆ. ಆದರೆ ಹೆಸರಲ್ಲಿ ಮಾತ್ರ ಸಿಎಂ ಇದೆ, ಇನ್ನೂ ಸಿಎಂ ಆಗಿಲ್ಲ ಎಂದು ಅನಿಸಿರಬಹುದು. ಅವರು ತುಂಬಾ ಜನರನ್ನು ಸಿಎಂ ಆಗಲು ಪೌರೋಹಿತ್ಯ ವಹಿಸಿದ್ದಾರೆ ಎಂದು ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ, ದೇವೇಗೌಡ, ಜೆ.ಹೆಚ್. ಪಟೇಲ್, ರಾಮಕೃಷ್ಣ ಹೆಗಡೆ ಸಿಎಂ ಆಗಲು ಪೌರೋಹಿತ್ಯ ವಹಿಸಿದ್ದೂ ಅವರೇ ಎಂದು ರವಿ ಹೇಳಿದರು.

ಅಲ್ಪಸಂಖ್ಯಾತ, ದಲಿತ ಎಂದು ಹೇಳುತ್ತಲೇ ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿತು. ಆದರೆ ಅಲ್ಪಸಂಖ್ಯಾತರಿಗೂ ಯಾಕೆ ಮಾಡ್ತೀರಿ ಎಂದು ಪ್ರಶ್ನಿಸಿದ ಅವರು, ಅವರು ಇಲ್ಲದಿದ್ದರೆ ನೀವು ಠೇವಣಿ ಉಳಿಸಿಕೊಳ್ಳುವುದೂ ಕಷ್ಟ. ಅಲ್ಪಸಂಖ್ಯಾತರಿಂದಲೇ ನೀವು ಗೆಲ್ಲುತ್ತಿದ್ದೀರಿ. ಅವರು ಮೆಜಾರಿಟಿ ಇರುವ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಗೆಲ್ಲುತ್ತಿದೆ. ಕಾಂಗ್ರೆಸ್ ಗೆ ನಿಜವಾಗಲೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲಿ. ಝಮೀರ್ ಅಹ್ಮದ್, ತನ್ವೀರ್ ಸೇಠ್, ಇಬ್ರಾಹಿಂ ಯಾರನ್ನಾದರೂ ಮಾಡಲಿ. ಆದರೆ ಅಲ್ಪಸಂಖ್ಯಾತರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಇಲ್ಲದಿದ್ದರೆ ವೋಟ್ ಬ್ಯಾಂಕ್ ಮಾಡಿ ಅವರ ಮುಖಕ್ಕೆ ತುಪ್ಪ ಸವರಿ ನೀವು ತುಪ್ಪ ತಿಂದಂತೆ ಆಗುತ್ತದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಇರುವುದರಿಂದಲೇ ಕಾಂಗ್ರೆಸ್ ಉಳಿದಿದೆ. ರಾಹುಲ್ ಗಾಂಧಿ ವಯನಾಡಿನಲ್ಲಿ ಗೆದ್ದಿರೋದು ಅಲ್ಪಸಂಖ್ಯಾತರು ಇರುವುದರಿಂದಲೇ. ಕಾಂಗ್ರೆಸ್ ಗೆಲ್ಲುವ 10 ಸೀಟುಗಳಲ್ಲಿ 8ರಲ್ಲಿ ಅಲ್ಪಸಂಖ್ಯಾತರು ಮೆಜಾರಿಟಿ ಇರುವ ಕ್ಷೇತ್ರಗಳೇ ಆಗಿವೆ. ಹೀಗಾಗಿ ಸಿ.ಎಂ.ಇಬ್ರಾಹಿಂ ಹೇಳಿಕೆಯಲ್ಲಿ ನ್ಯಾಯವಿದೆ. ಅವರಿಗೆ ನನ್ನ ಬೆಂಬಲವಿದೆ ಎಂದು ಸಿ.ಟಿ.ರವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News