ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ
ಯಾದಗಿರಿ, ಜೂ. 28: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭೀಮರಾಯ ಸುರಪುರ (45), ಶಾಂತಮ್ಮ ಸುರಪುರ (36), ಸುಮಿತ್ರಾ (12), ಶ್ರೀದೇವಿ (13), ಶಿವರಾಜ (9), ಲಕ್ಷ್ಮೀ (4) ಮೃತಪಟ್ಟವರು.
ವಿಪರೀತ ಸಾಲ ಮಾಡಿಕೊಂಡಿದ್ದರಿಂದ ಅದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಈಜುಗಾರರು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದುಬಂದಿದೆ.
'ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ತನಿಖೆ ನಂತರವೇ ಸಂತ್ಯಾಂಶ ಹೊರ ಬರಲಿದೆ' ಎಂದು ಶಹಾಪುರ ಕ್ರೈಂ ಪಿಎಸ್‌ಐ ಆರ್.ಶಾಮಸುಂದರ ನಾಯಕ ತಿಳಿಸಿದ್ದಾರೆ.
ಪೊಲೀಸರು, ತಹಶೀಲ್ದಾರ್ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ. ತುಂಬಾ ಸಾಲ ಮಾಡಿದ್ದರಿಂದ ಅದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ಇದೆ. ಸಾಲದ ಹೊರತಾಗಿ ಬೇರೆ ಯಾವುದೇ ಕಾರಣಗಳು ಇರುವ ಸಾಧ್ಯತೆ ಇಲ್ಲ. ಆದರೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ.
-ಚೆನ್ನಯ್ಯ ಹಿರೇಮಠ, ಸರ್ಕಲ್ ಇನ್‍ಸ್ಪೆಕ್ಟರ್, ಶಹಾಪುರ