ಪ್ರಧಾನಿ ಸಮಾರಂಭ ನಿಲ್ಲಿಸಿ ಜನರ ಬಗ್ಗೆ ಕಾಳಜಿ ವಹಿಸಲಿ: ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ

Update: 2021-06-28 12:57 GMT

ಬೆಂಗಳೂರು, ಜೂ.28: ದೇಶದಲ್ಲಿ ‘ಜೂನ್ 21ರಂದು 84 ಲಕ್ಷ ಕೋವಿಡ್ ಲಸಿಕೆ ವಿತರಣೆಯಾಗಿದ್ದು ಇದನ್ನು ದೊಡ್ಡ ಸಾಧನೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭ ವ್ಯವಸ್ಥಾಪಕ ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದರು. ಅದು ನಿಜ ಎಂಬುದನ್ನು ಜೂನ್ 21ರ ಕಾರ್ಯಕ್ರಮ ಸಾಕ್ಷಿ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠೀಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಮಾರಂಭಕ್ಕೂ ಕೆಲ ದಿನಗಳ ಮುಂಚಿತವಾಗಿ ಲಸಿಕೆ ವಿತರಣೆ ಸರಿಯಾಗಿ ಆಗಿಲ್ಲ. ನಂತರ 22ರಿಂದ 25ರವರೆಗೂ ಲಸಿಕೆ ವಿತರಣೆ ಆಗಿಲ್ಲ. ಅಂದರೆ ಒಂದು ದಿನದ ಶಕ್ತಿ ಪ್ರದರ್ಶನಕ್ಕೆ, ಸಮಾರಂಭಕ್ಕೆ ಬಿಜೆಪಿ ಹೇಗೆಲ್ಲಾ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ಮೋದಿ ಅವರು ಜಾಗಟೆ, ಚಪ್ಪಾಳೆ, ಗಂಟೆ ಹೊಡಿಸಿ ಸಮಾರಂಭ ಮಾಡಿದ್ದು ಸಾಕು. ಅದರಿಂದ ಸೋಂಕು ಇಳಿದಿಲ್ಲ. ಇನ್ನಾದರೂ ಸಮಾರಂಭಗಳನ್ನು ಬಿಟ್ಟು ಜನರ ರಕ್ಷಣೆಗೆ ಮುಂದಾಗಿ ಎಂದು ಕಾಂಗ್ರೆಸ್ ಕೇಳಿಕೊಳ್ಳುತ್ತದೆ. ಮೋದಿ ಅವರು ಏನೇ ಮಾತನಾಡುವುದಿದ್ದರೂ ಮನ್ ಕಿ ಬಾತ್‍ನಲ್ಲಿ ಹೇಳುತ್ತಾರೆಯೇ ಹೊರತು ಮಾಧ್ಯಮಗಳ ಮುಂದೆ ಬರುವುದಿಲ್ಲ. ಅವರಿಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವುದು ಬೇಕಿಲ್ಲ ಎಂದು ಅವರು ಟೀಕಿಸಿದರು.

ನಾವುಗಳು ನಿಮ್ಮ ಮುಂದೆ ಬಂದು ಮಾತನಾಡುತ್ತೇವೆ. ಆದರೆ ಮೋದಿ ಅವರು ಕೇವಲ ಏಕ ಮಾರ್ಗ ಸಂವಹನಕ್ಕೆ ಮಾತ್ರ ಆದ್ಯತೆ ನೀಡುತ್ತಾರೆ. ಈ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕೋವ್ಯಾಕ್ಸಿನ್ ಲಸಿಕೆ 3ನೇ ಪ್ರಯೋಗವಾಗದೇ ಅದನ್ನು ಬಳಸಲು ವಿಶ್ವಸಂಸ್ಥೆ ಅನುಮತಿ ನೀಡದೇ ಇದ್ದಾಗ ಸರಕಾರ ಅದನ್ನು ಜನರಿಗೆ ನೀಡಲು ಮುಂದಾಗಿತ್ತು. ನಾವು ಅದನ್ನು ಪ್ರಶ್ನಿಸಿದೆವು ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.

ಕೋವಿಶೀಲ್ಡ್ ಲಸಿಕೆ ಮೂರು ಹಂತಗಳ ಪ್ರಯೋಗ ಮುಗಿಸಿ ಐಸಿಎಂಆರ್ ಹಾಗೂ ವಿಶ್ವಸಂಸ್ಥೆ ಅನುಮತಿ ಪಡೆದಾಗ ನಾವದಕ್ಕೆ ಪ್ರಶ್ನಿಸಲಿಲ್ಲ. ಕೋವ್ಯಾಕ್ಸಿನ್ ಕೂಡ ಮೂರನೇ ಪ್ರಯೋಗ ಮುಗಿಸಿ ಅನುಮತಿ ಪಡೆದ ಬಳಿಕ ನಾವು ಅದನ್ನು ಸ್ವಾಗತಿಸಿದೆವು. ಆದರೆ ಪ್ರಧಾನಮಂತ್ರಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

‘ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿ ಇತ್ತೀಚೆಗೆ ಜಮ್ಮು ಕಾಶ್ಮೀರ ನಾಯಕರ ಜತೆ ಸಭೆ ನಡೆಸಿದರು. ಇಷ್ಟು ದಿನಗಳ ಕಾಲ ಅವರನ್ನು ಗೃಹಬಂಧನದಲ್ಲಿ ಇಟ್ಟಿದ್ದ ಕೇಂದ್ರ ಸರಕಾರ ಅವರ ಜತೆ ಸಭೆ ಮಾಡುವಂತಹ ಬದಲಾವಣೆ ಏನಾಗಿದೆ? ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಲ್ಲಬೇಕು, ಕಾಶ್ಮೀರಿ ಪಂಡಿತರು ಮತ್ತೆ ಅಲ್ಲಿಗೆ ಮರಳಬೇಕು ಎಂಬ ಉದ್ದೇಶ ಬಿಜೆಪಿಯದ್ದಾಗಿದೆ. ಈ ಎರಡರಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಆದರೂ ಈಗ ಈ ಸಭೆ ನಡೆಸಿರುವುದು ಏಕೆ?’ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.

‘ಜೂನ್ 14ರಂದು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ 2 ಕೋಟಿ ರೂಪಾಯಿಗೆ ಹರೀಶ್ ಮತ್ತು ಕುಸುಮ್ ಪಾಟಕ್ ಅವರು ಭೂಮಿ ಖರೀದಿ ಮಾಡುತ್ತಾರೆ. ನಂತರ ಐದೇ ನಿಮಿಷಗಳಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಗೆ ಅದೇ ಭೂಮಿಯನ್ನು 18 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ. ಇದರ ಜತೆಗೆ ರಾಮಜನ್ಮ ಭೂಮಿ ಟ್ರಸ್ಟ್ ಇದೇ ಹರೀಶ್ ಮತ್ತು ಕುಸುಮ್ ಅವರಿಂದ 8 ಕೋಟಿಗೆ ಬೇರೆ ಕಡೆ ಜಮೀನನ್ನು ಖರೀದಿಸಿದೆ. ಅಂದರೆ ಟ್ರಸ್ಟ್ ಇವರಿಬ್ಬರಿಂದ 25 ಕೋಟಿ ರೂಪಾಯಿ ನೀಡಿ ಮಂದಿರ ನಿರ್ಮಾಣಕ್ಕೆ ಭೂಮಿ ಖರೀದಿಸಿದೆ ಎಂದು ಅವರು ಹೇಳಿದರು.

ಮಹಂತ್ ಧರ್ಮದಾಸ್, ಮಹಂತ್ ಸುರೇಶ್ ದಾಸ್ ಹಾಗೂ ಮಹಂತ್ ಸೀತಾರಾಮ್ ಎಂಬ ಕಾವಿಧಾರಿಗಳು ಹಾಗೂ ಉನ್ನತಮಟ್ಟದ ಹಿಂದೂ ಸಮಾಜದ ಯೋಗಿಗಳಾಗಿದ್ದು, ಇವರು ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕು ಎಂದಿದೆ. ಈ ಹಿಂದೆ ಮೋದಿ ಅವರು ರಾಮಮಂದಿರ ಭೂಮಿ ವಿಚಾರವಾಗಿ ಕಾಂಗ್ರೆಸ್ ಎಂದಿಗೂ ನ್ಯಾಯಾಲಯದ ಮೊರೆ ಹೋಗಿಲ್ಲ ಎಂದು ಆರೋಪಿಸಿತ್ತು. ಆದರೆ ಈಗ ಈ ಪ್ರಕರಣದ ತನಿಖೆಯನ್ನು ನ್ಯಾಯಾಲಯಕ್ಕೆ ಯಾಕೆ ನೀಡುತ್ತಿಲ್ಲ? ರಾಜ್ಯದಿಂದಲೂ ಮಂದಿರಕ್ಕಾಗಿ ಅನೇಕ ಜನ ದೇಣಿಗೆ ನೀಡಿದ್ದು, ಈ ಅವ್ಯವಹಾರ ವಿಚಾರವಾಗಿ ಉನ್ನತಮಟ್ಟದ ತನಿಖೆಯಾಗಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಜಿ.ಎ.ಬಾವಾ, ಕೆಪಿಸಿಸಿ ಮಾಧ್ಯಮ ವಿಭಾಗದ ಸಂಚಾಲಕರಾದ ರಾಮಚಂದ್ರಪ್ಪ ಹಾಗೂ ಸಲೀಮ್ ಉಪಸ್ಥಿತರಿದ್ದರು.

ಕಾನೂನು ಹೋರಾಟಕ್ಕೆ ಸಿದ್ಧ

‘ಇನ್ನು ಶಿವಮೊಗ್ಗ ವಿಮಾನ ನಿಲ್ದಾಣ ವಿಚಾರವಾಗಿ ಸಂಸದರಾದ ಬಿ.ವೈ.ರಾಘವೇಂದ್ರ ಕಮಲ ರಾಷ್ಟ್ರೀಯ ಪುಷ್ಪ. ಹೀಗಾಗಿ ನಾವು ಆ ರೂಪದಲ್ಲಿ ವಿಮಾನ ನಿಲ್ದಾಣ ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ. ರಾಘವೇಂದ್ರ ಅವರೇ ಚುನಾವಣಾ ಆಯೋಗ ಕಿವಿಗೆ ಕಮಲದ ಹೂವಿಟ್ಟುಕೊಂಡಿಲ್ಲ. ಮುಂದಿನ ಒಂದು ವಾರದಲ್ಲಿ ನಿಮ್ಮ ನಿರ್ಧಾರ ಹಿಂಪಡೆಯದಿದ್ದರೆ ನಾವು ಕಾನೂನು ಹೋರಾಟ ಆರಂಭಿಸಬೇಕಾಗುತ್ತದೆ’ ಎಂದು ಬ್ರಿಜೇಶ್ ಕಾಳಪ್ಪ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News