ನಟ ಸಂಚಾರಿ ವಿಜಯ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸುವಂತೆ ಮುಖ್ಯಮಂತ್ರಿಗೆ ಮನವಿ
ಬೆಂಗಳೂರು, ಜೂ.28: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ 'ರಾಜ್ಯ ಪ್ರಶಸ್ತಿ' ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕ ನಾಟಕ ಅಕಾಡಮಿ ಮಾಜಿ ಸದಸ್ಯ ಆರ್.ವೆಂಕಟರಾಜು ಮನವಿ ಮಾಡಿದ್ದಾರೆ.
ನಟ ಸಂಚಾರಿ ವಿಜಯ್ ಅವರು ರಂಗಭೂಮಿ ಕಲಾವಿದರಾಗಿ, ಕನ್ನಡ ಚಿತ್ರರಂಗ ಪ್ರವೇಶಿಸಿ ರಾಷ್ಟ್ರಪ್ರಶಸ್ತಿ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ವಿಜಯ್ ಅವರ ಭಾವನೆ ಅರಿತ ಅವರ ಕುಟುಂಬದ ಸದಸ್ಯರು ಸಂಚಾರಿ ವಿಜಯ್ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಿದ್ದು, ಸಾವಿನಲ್ಲೂ ತ್ಯಾಗ ಮೆರೆದ ಸಹೃದಯಿ ಕಲಾವಿದರಾಗಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರವು ರಂಗಭೂಮಿ ಹಿನ್ನೆಲೆಯಿಂದ ಚಲನಚಿತ್ರರಂಗ ಪ್ರವೇಶಿಸಿ ತಮ್ಮ ಮೊದಲ ಚೊಚ್ಚಲ ಚಲನಚಿತ್ರ ನಿರ್ದೇಶಿಸುವ ನಿರ್ದೇಶಕ ತಂತ್ರಜ್ಞರನ್ನು ಒಳಗೊಂಡಂತೆ, ನಾಯಕ, ನಾಯಕಿ, ಹಾಸ್ಯನಟ, ಖಳನಟ, ಪೋಷಕನಟ ಸೇರಿ ಯಾವುದೇ ಪ್ರಕಾರದ ಕಲಾವಿದರಿಗೆ ರಂಗಭೂಮಿ ಹಿನ್ನೆಲೆಯ ಸಂಚಾರಿ ವಿಜಯ್ ಹೆಸರಿನಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಬೇಕು. ಆ ಮೂಲಕ ಪ್ರತಿಭೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮತ್ತು ಅಗಲಿದ ನಟ ಸಂಚಾರಿ ವಿಜಯ್ ಹೆಸರನ್ನು ಚಿರಸ್ಥಾಯಿಗೊಳಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.