ಜೂ.30ರಿಂದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ: ಸಚಿವ ಸುರೇಶ್ ಕುಮಾರ್

Update: 2021-06-28 15:54 GMT

ಬೆಂಗಳೂರು, ಜೂ. 28: `ಎರಡು-ಮೂರು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಮಹೂರ್ತ ಕೂಡಿಬಂದಿದ್ದು, ಜೂ. 30ರಿಂದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಶಿಕ್ಷಕರ ವರ್ಗಾವಣೆಗೆ ಅಧಿಕೃತ ವೇಳಾಪಟ್ಟಿ ಹಾಗೂ ಅಧಿಸೂಚನೆ ಜೂ.30ಕ್ಕೆ ಪ್ರಕಟಗೊಳ್ಳಲಿದ್ದು, ಅಂದಿನಿಂದಲೇ ವರ್ಗಾವಣಾ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. 2019-20ನೆ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರಿಗೆ ನ್ಯಾಯ ದೊರಕಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅವರ ಸಂಕಷ್ಟಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ವಿಧಾನಮಂಡಲ ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಕಾಯ್ದೆ ಅಧಿಸೂಚಿಸಿದ ಸಂದರ್ಭದಲ್ಲಿ ಕೆಲವು ಶಿಕ್ಷಕರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಅದಕ್ಕಾಗಿ ನಾವು `ಸುಗ್ರೀವಾಜ್ಞೆ'ಯ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದೆವು ಎಂದರು.

ಸಚಿವ ಸಂಪುಟದ ಅನುಮೋದನೆಯನ್ನು ಪಡೆದು ರಾಜ್ಯಪಾಲರು ಒಪ್ಪಿದ ಬಳಿಕ ಸುಗ್ರೀವಾಜ್ಞೆಯನ್ನು ನಾವು ಹೊರತಂದಿದ್ದೇವೆ. ಪೂರಕ ನಿಯಮಗಳನ್ನು ಅಂತಿಮಗೊಳಿಸಿ, ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. 2019-2020ರಲ್ಲಿ ಕಡ್ಡಾಯ/ ಹೆಚ್ಚುವರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಲಿದೆ. ಈ ಬಾರಿಗೆ ಸಂಬಂಧಿಸಿದಂತೆ ವಲಯ ಅಥವಾ ಹೆಚ್ಚುವರಿ ವರ್ಗಾವಣೆ ಯಾವುದೂ ಇರುವುದಿಲ್ಲ. 2019-20ರಲ್ಲಿ ಕಡ್ಡಾಯ/ಹೆಚ್ಚುವರಿ ವರ್ಗಾವಣೆಗೊಳಗಾಗಿದ್ದ ಶಿಕ್ಷಕರಿಗೆ ಮೊದಲ ಆದ್ಯತೆಯ ಕೌನ್ಸೆಲಿಂಗ್ ಇರಲಿದೆ. ಈಗಾಗಲೇ ಸ್ವೀಕೃತಗೊಂಡಿರುವ 75 ಸಾವಿರ ಅರ್ಜಿಗಳಿಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ಈ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಅರ್ಹರಾಗುವ ಶಿಕ್ಷಕರಿಗೂ ಎರಡನೇ ಹಂತದ ಅವಕಾಶ ಕಲ್ಪಿಸಲಾಗುವುದು' ಎಂದು ಸುರೇಶ್ ಕುಮಾರ್ ತಿಳಿಸಿದರು. 

ಶಿಕ್ಷಕರು ಜವಾಬ್ದಾರಿ ಮೆರೆಯಬೇಕಿದೆ: `ಸಾವಿರಾರು ಶಿಕ್ಷಕರು ಚಾತಕಪಕ್ಷಿಗಳ ಹಾಗೆ ವರ್ಗಾವಣೆಗೆ ಕಾಯುತ್ತಿದ್ದಾರೆ. ಇದು ಸರಕಾರ ಅವರಿಗಾಗಿ ಕಷ್ಟಪಟ್ಟು ಹೊರತಂದಿರುವ ಅತ್ಯಂತ ಶಿಕ್ಷಕಸ್ನೇಹಿ ಕಾಯ್ದೆಯಾಗಿದೆ. ಇದನ್ನು ಅನುಷ್ಠಾನಗೊಳಿಸಿಕೊಂಡು ಅದರ ಪ್ರಯೋಜನವನ್ನು ಪಡೆಯುವುದು, ತಮ್ಮ ಸಮುದಾಯದ ಹಿತಕ್ಕೆ ಮಿಡಿಯುವುದೂ ಅವರ ಕರ್ತವ್ಯವಾಗಿದೆ. ಎಲ್ಲ ಶಿಕ್ಷಕರೂ ಇದನ್ನು ಸ್ವಾಗತಿಸುವ ಜವಾಬ್ದಾರಿ ಹೊಂದಿದ್ದಾರೆ. ಯಾವುದೇ ಅಡೆತಡೆಗಳಿಲ್ಲದೆ ಇದನ್ನು ಅನುಷ್ಠಾನ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ' ಎಂದು ಅವರು ವಿವರಿಸಿದರು.

`ಈ ಬಾರಿಯ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯೂ ಅತ್ಯಂತ ಪಾರದರ್ಶಕವಾಗಿರಲಿದೆ. `ಶಿಕ್ಷಕ ಮಿತ್ರ ಆ್ಯಪ್' ಮೂಲಕ ಶಿಕ್ಷಕರು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಸ್ಥಳ ಆಯ್ಕೆಯನ್ನೂ ಮಾಡಿಕೊಳ್ಳಬಹುದು. ಹಾಗಾಗಿ ಇಂತಹದೊಂದು ಶಿಕ್ಷಕರ ಪರವಾದ ಸಂಪೂರ್ಣ ಪಾರದರ್ಶಕವಾದ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಸ್ವಾಗತಿಸಿ, ಬಳಸಿ ಪ್ರಯೋಜನ ಪಡೆಯಬೇಕು' ಎಂದು ಸಚಿವ ಸುರೇಶ್ ಕುಮಾರ್, ಶಿಕ್ಷಕರಲ್ಲಿ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News