ಮನೆಯ ಶೌಚಾಲಯದ ಗುಂಡಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಚಾಮರಾಜನಗರ, ಜೂ.28: ಮನೆಯ ಶೌಚಾಲಯದ ಗುಂಡಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ರಾಜಶೇಖರ ಮೂರ್ತಿ (41) ಮನೆಯ ಶೌಚಾಲಯದ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ವ್ಯಕ್ತಿ.
ಮೃತರ ತಂದೆ ಮಹದೇವಸ್ವಾಮಿ ರವಿವಾರ ಹನೂರು ಪೊಲೀಸ್ ಠಾಣೆಗೆ ತೆರಳಿ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಅದರೆ ಸೋಮವಾರ ಸಂಜೆಯ ವೇಳೆಗೆ ಮನೆಯ ಶೌಚಾಯದ ಕಡೆಯಿಂದ ದುರ್ವಾಸನೆ ಬಂದಿದ್ದರಿಂದ ಪರಿಶೀಲಿಸಿದಾಗ ರಾಜಶೇಖರ ಮೂರ್ತಿಯ ಶವ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಕೊಳ್ಳೇಗಾಲ ಡಿವೈಎಸ್‌ಪಿ ನಾಗರಾಜು, ಹನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ನೀಡಿ ಪರಿಶೀಲಿಸಿದ್ದು, ಮೃತ ರಾಜಶೇಖರ ಮೂರ್ತಿಯ ಶವವನ್ನು ಹೊರತೆಗೆದು ಹನೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಸಂಬಂಧ ಹನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.