ಶಾಸಕ ಯತ್ನಾಳ್ ರನ್ನು ಭೇಟಿಯಾದ ಸಚಿವ ಯೋಗೇಶ್ವರ್: ಬಿಎಸ್‌ವೈ ವಿರೋಧಿಗಳನ್ನು ಒಂದುಗೂಡಿಸುವ ಬಗ್ಗೆ ಚರ್ಚೆ ?

Update: 2021-06-29 11:00 GMT

ವಿಜಯಪುರ, ಜೂ.29: ವಿಜಯಪುರ ಜಿಲ್ಲೆಗೆ ಆಗಮಿಸಿದ ಪ್ರವಾಸೋದ್ಯಮ ಇಲಾಖೆ ಸಚಿವ ಯೋಗೇಶ್ವರ್ ಅವರು ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಂಡಾಯ ಎದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಭೇಟಿ ಮಾಡಿದ್ದು, ಸಿಎಂ ಬಿಎಸ್‌ವೈ ವಿರೋಧಿಗಳನ್ನು ಒಂದುಗೂಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕಲಬುರಗಿಯಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದ ಯೋಗೇಶ್ವರ್ ಅವರು ಶಾಸಕ ಯತ್ನಾಳ್ ರನ್ನು ವಿಜಯಪುರ ನಗರದ ಹೊರವಲಯದಲ್ಲಿರುವ ಖಾಸಗಿ ಹೊಟೇಲೊಂದರಲ್ಲಿ ಭೇಟಿಯಾದರು. ಈ ಸಂದರ್ಭ ಸಚಿವ ಯೋಗೇಶ್ವರ್ ರನ್ನು ಯತ್ನಾಳ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು.

ಬಳಿಕ ಕೆಲ ಕಾಲ ರಹಸ್ಯವಾಗಿ ಚರ್ಚೆ ನಡೆಸಿದ ಶಾಸಕ ಯತ್ನಾಳ್ ಹಾಗೂ ಸಚಿವ ಯೋಗೇಶ್ವರ್, ಸಿಎಂ ಬದಲಾವಣೆ ವದಂತಿ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಸಿಎಂ ಬಿಎಸ್‌ವೈ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಶಾಸಕರನ್ನು ಒಂದುಗೂಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಚರ್ಚೆ ಬಳಿಕ ಹೊಟೇಲ್ ನಲ್ಲಿಯೇ ಯತ್ನಾಳ್ ಹಾಗೂ ಯೋಗೇಶ್ವರ್ ಅವರು ಊಟ ಮಾಡಿದರು. ಈ ವೇಳೆ ಬಿಜೆಪಿ ನಾಯಕಿ, ಚಿತ್ರ ನಟಿ ಶೃತಿ ಹಾಗೂ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News