ಗೌರಿಲಂಕೇಶ್‌ ಹತ್ಯೆ ಆರೋಪಿ ವಿರುದ್ಧ KCOCA ಕಾಯ್ದೆ ರದ್ದು: ಕರ್ನಾಟಕ ಸರಕಾರಕ್ಕೆ ಸುಪ್ರೀಂ ನೋಟಿಸ್

Update: 2021-06-29 15:40 GMT

ಹೊಸದಿಲ್ಲಿ,ಜೂ.25: ಪತ್ರಕರ್ತೆ, ಚಿಂತಕಿ ಗೌರಿಲಂಕೇಶ್ ಕೊಲೆ ಪ್ರಕರಣದ ಆರೋಪಿ ಮೋಹನ್ ನಾಯಕ್‌ನ ಜಾಮೀನು ಅರ್ಜಿಯು, ಆತನ ವಿರುದ್ಧದ ಸಂಘಟಿತ ಅಪರಾಧಗಳ ಕಾಯ್ದೆಯನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಅವಲಂಭಿಸಿರಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ.

ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ಅವರ ನಿವಾಸದ ಆವರಣದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 12 ಮಂದಿಯನ್ನು ಬಂಧಿಸಲಾಗಿತ್ತು.
    
ಆರೋಪಿಗಳಲ್ಲೊಬ್ಬನಾದ ಮೋಹನ್ ನಾಯಕ್ ವಿರುದ್ಧ ಸಂಘಟಿತ ಅಪರಾಧಗಳ ಕಾಯ್ದೆಯಡಿ ಬೆಂಗಳೂರು ಪೊಲೀಸರು ಹೊರಿಸಿದ್ದ ಆರೋಪಗಳನ್ನು ಕರ್ನಾಟಕ ಹೈಕೋರ್ಟ್ ಎಪ್ರಿಲ್ 22ರಂದು ಕೈಬಿಟ್ಟಿತ್ತು. ತರುವಾಯ ಪೊಲೀ ಸರು ಆರೋಪಿ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
  
ರಾಜ್ಯ ಹೈಕೋರ್ಟ್ ಎಪ್ರಿಲ್ನಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಸುಪ್ರೀಂಕೋರ್ಟ್ನಲ್ಲಿ ವಿಶೇಷ ರಜಾಕಾಲದ ಅರ್ಜಿ ಸಲ್ಲಿಸಿದ್ದರು. ಜಾಮೀನು ಕೋರಲು ಆರೋಪಿ ಮೋಹನ್ ನಾಯಕ್ ರಾಜ್ಯ ಹೈಕೋರ್ಟ್ನ ಆದೇಶವನ್ನು ಅವಲಂಭಿಸಿದ್ದಾನೆಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮೋಹನ್ ನಾಯಕ್‌ನ ಜಾಮೀನು ಅರ್ಜಿಯ ಆಲಿಕೆ ಪೂರ್ಣಗೊಂಡಿದ್ದು, ಹೈಕೋರ್ಟ್ ಬುಧವಾರ ತೀರ್ಪು ನೀಡುವ ನಿರೀಕ್ಷೆಯಿತ್ತು.
 
ಆದರೆ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಅನಿರುದ್ದ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು ಮಂಗಳವಾರ ಕರ್ನಾಟಕ ಸರಕಾರಕ್ಕೆ ಈ ಬಗ್ಗೆ ನೋಟಿಸ್ ಜಾರಿಗೊಳಿಸಿದ್ದು ಅರ್ಜಿಯ ಆಲಿಕೆಯನ್ನು ಜುಲೈ 15ಕ್ಕೆ ಮುಂದೂಡಿದೆ. ಕವಿತಾ ಅವರು ಸಲ್ಲಿಸಿದ ಅರ್ಜಿಯ ಇತ್ಯರ್ಥವಾಗುವವರೆಗೆ ಮೋಹನ್ ನಾಯಕ್ಗೆ ಜಾಮೀನು ನೀಡಬಾರದೆಂದು ಅದು ಆದೇಶಿಸಿರುವುದಾಗಿ ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News