ಎಸೆಸೆಲ್ಸಿ ಪರೀಕ್ಷೆ ಮೂಲಕ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳುತ್ತಿರುವ ಸರಕಾರ: ಎಚ್.ವಿಶ್ವನಾಥ್ ವಾಗ್ದಾಳಿ

Update: 2021-06-29 11:26 GMT

ಮೈಸೂರು, ಜೂ.29: ಎಸೆಸೆಲ್ಸಿ ಪರೀಕ್ಷೆ ನಡೆಸುವ ಸರಕಾರದ ನಿರ್ಧಾರದಿಂದ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳಲಾಗುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸೆಸೆಲ್ಸಿ ಪರೀಕ್ಷೆ ನಡೆಸಲು ಹಠಕ್ಕೆ ಬಿದ್ದಿರುವ ಶಿಕ್ಷಣ ಸಚಿವ ಹಾಗೂ ಸರಕಾರ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳುವ ಕೆಲಸವನ್ನು ಮಾಡುತ್ತಿದೆ. ಮುಖ್ಯಮಂತ್ರಿಗಳು ನಾನು ಹೇಳಿದ್ದೇ ಸರಿ, ನಾನು ಮಾಡಿದ್ದೇ ಸರಿ ಎಂಬ ಲೆಕ್ಕಾಚಾರದಲ್ಲಿದ್ದಾರೆ ಎಂದು ಕಿಡಿಕಾರಿದರು.

ಜಗತ್ತಿನ ಹೊಸ ಸಮಸ್ಯೆಯನ್ನು ಲೆಕ್ಕಿಸದೆ ಪರೀಕ್ಷೆ ನಡೆಸುವುದು ಸರಿಯಲ್ಲ. ಇನ್ನು ಹತ್ತು ಹದಿನೈದು ದಿನಗಳಲ್ಲಿ ಡೆಲ್ಟಾ ವೈರಸ್ ಹೆಚ್ಚಾಗುತ್ತದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಮಗು ನಾಡಿನ ಆಸ್ತಿ. ಪ್ರತಿ ಮಗು ಶಾಲೆಗೆ ಬರುತ್ತದೆ. ಶಿಕ್ಷಣ ಪ್ರತಿ ಮಗುವಿನ ಹಕ್ಕು, ಹಾಗಂತ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳಬಾರದು ಎಂದು ಹೇಳಿದರು.

ವಿಧಾನಸೌಧದಲ್ಲಿ ಸಭೆಯ ಮೇಲೆ ಸಭೆ ನಡೆಸಲಾಗುತ್ತದೆ. ಈ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕಿತ್ತು ಎಂಬ ಕಾಮನ್ಸೆನ್ ಬೇಡವೇ? ಯಾರನ್ನು ಕೇಳಿ ಪರೀಕ್ಷೆ ನಿರ್ಧಾರ ಮಾಡಿದ್ದೀರಿ? ಕೇಂದ್ರ ಸರಕಾರವೇ 12ನೇ ತರಗತಿಯ ಸಿಬಿಎಸ್‍ಸಿ ಪರೀಕ್ಷೆಯನ್ನು ರದ್ದು ಮಾಡಿದೆ. ಆದರೆ ನಮ್ಮ ರಾಜ್ಯ ಸರಕಾರ ಏಕೆ ಹಠಕ್ಕೆ ಬಿದ್ದಿದೆ ಎಂದು ಪ್ರಶ್ನಿಸಿದರು.

ಎಸೆಸೆಲ್ಸಿ ಮಕ್ಕಳು 40 ಮಾರ್ಕ್ಸ್ ಗೆ ಪರೀಕ್ಷೆ ಬರೆದರೆ ಸಾಕು ಎಂದು ಹೇಳುತ್ತಾರೆ. ಒಂದೇ ಬಾರಿ ಮೂರು ವಿಷಯಗಳ ಒತ್ತಡ ಮಕ್ಕಳ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ಗೊತ್ತಾ? ಯಾವ ಪುರುಷಾರ್ಥಕ್ಕೆ ಈ ಪರೀಕ್ಷೆ ಮಾಡಬೇಕು? ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ ಜೀವನಕ್ಕಿಂತ ಜೀವ ಮುಖ್ಯ ಎಂದು. ಅಂತಹದರಲ್ಲಿ ನೀವ್ಯಾಕೆ ಮಕ್ಕಳ ಜೀವ ತೆಗೆಯಲು ಮುಂದಾಗಿದ್ದೀರ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಾವ ತಜ್ಞರ ಅಭಿಪ್ರಾಯ ಪಡೆದು ನೀವು ಪರೀಕ್ಷೆ ನಡೆಸಲು ಮುಂದಾಗಿದ್ದೀರಿ ? ಸರಕಾರದ ನಿರ್ಧಾರದಿಂದ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆ ಬೇಕಾಗಿರಲಿಲ್ಲ. ಸರಕಾರ ಹಾಗೂ ಶಿಕ್ಷಣ ಸಚಿವರು ಅಹಂ ಬಿಟ್ಟು ಕೆಲಸ ಮಾಡಬೇಕಿದೆ ಎಂದು ಕಿಡಿಕಾರಿದರು.

ಇನ್ನು ಹತ್ತು ಹದಿನೈದು ದಿನದಲ್ಲಿ ಮೂರನೇ ಅಲೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ತಜ್ಞರ ಸಲಹೆ ಪಡೆದಿಲ್ಲ, ಹಿಂದೆ ಶಿಕ್ಷಣ ಇಲಾಖೆಯಲ್ಲಿ ಸಚಿವರಾಗಿ ಕೆಲಸ ಮಾಡಿದವರ ಸಲಹೆ ಪಡೆದಿಲ್ಲ. ಏಕಾಏಕಿ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಸಾವಿನ ದವಡೆಗೆ ತಳ್ಳಲಾಗುತ್ತಿದೆ. ಇಡೀ ಜಗತ್ತೇ ಕೊರೋನ ಸವಾಲನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡುವುದು ಅವೈಜ್ಞಾನಿಕ ಎಂದು ಹರಿಹಾಯ್ದರು.

ಕೆಲವು ತಜ್ಞರು ಸರಕಾರದ ಮರ್ಜಿನಲ್ಲಿದ್ದಾರೆ. ಡಾ.ದೇವಿ ಶೆಟ್ಟಿಯವರೇ ಮೂರನೇ ಅಲೆ ಬರುತ್ತದೆ ಅಂತಾರೆ. ಆದರೆ ಪರೀಕ್ಷೆ ಮಾಡಬಹುದು ಅಂತಾರೆ. ದೇವಿ ಶೆಟ್ಟಿಯವರು ಎರಡೂ ಹೇಳಿಕೆಯನ್ನು ಕೊಡುತ್ತಿದ್ದಾರೆ. ಯಾಕಾಗಿ ಈ ರೀತಿ ಹೇಳುತ್ತಿದ್ದಾರೆ ಗೊತ್ತಿಲ್ಲ. ಜೀವವನ್ನು ರಕ್ಷಿಸುವ ಕೆಲಸವಾಗಬೇಕು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಪರೀಕ್ಷೆ ವಿಚಾರ ಗೊತ್ತಿಲ್ಲ ಎನ್ನುತ್ತಾರೆ. ಯಾಕಾಗಿ ಈ ರೀತಿ ಮಾಡಿದ್ದಾರೆ ಅಂತ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಶಿಕ್ಷಣ ಸಚಿವರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಸರಕಾರ ನಡೆಸುವವರಿಗೆ ಬುದ್ದಿ ಇದ್ದರೆ ಸಚಿವರನ್ನು ಬದಲಾವಣೆ ಮಾಡಬಹುದು ಎಂದು ಸರಕಾರದ ಬಗ್ಗೆ ವ್ಯಂಗ್ಯವಾಗಿ ಉತ್ತರಿಸಿದರು.

''ಕಾಸರಗೋಡು ಉಳಿವಿಗೆ ರಾಜ್ಯ ಸರಕಾರ ಮುಂದಾಗಬೇಕು''
ಕಾಸರಗೋಡು ಉಳಿವಿಗೆ ರಾಜ್ಯ ಸರಕಾರ ಮುಂದಾಗಬೇಕು ಎಂದು ಎಚ್.ವಿಶ್ವನಾಥ್ ಆಗ್ರಹಸಿದರು. ಕಾಸರಗೋಡು ಜಿಲ್ಲೆ ನಮ್ಮದೇ. ಅಲ್ಲಿನ ಕನ್ನಡದ ಊರುಗಳ ನಾಮಫಲಕವನ್ನು ತೆರವುಗೊಳಿಸುವುದು ಸರಿಯಲ್ಲ. ರಾಜ್ಯ ಸರಕಾರ ಈ ವಿಚಾರದಲ್ಲಿ ಪತ್ರ ಬರೆದು ಸುಮ್ಮನಾಗುವುದಲ್ಲ. ಮಂಜೇಶ್ವರ ಶಾಸಕ ಅಶ್ರಫ್ ಕನ್ನಡದಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಕಾಸರಗೋಡು ಉಳಿವಿಗೆ ರಾಜ್ಯ ಸರಕಾರ ಮುಂದಾಗಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News