ಲಸಿಕೆ ವಿತರಣೆ ಸ್ಥಗಿತ ಖಂಡಿಸಿ ಶಿವಮೊಗ್ಗ ಜಿಲ್ಲಾದ್ಯಂತ ಕಾಂಗ್ರೆಸ್ ಪ್ರತಿಭಟನೆ

Update: 2021-06-29 14:37 GMT

ಶಿವಮೊಗ್ಗ, ಜೂ.29: ಲಸಿಕೆ ನೀಡದ ಬಿಜೆಪಿ ಸರ್ಕಾರ ತೊಲಗಲಿ, ಪ್ರಧಾನಿ ಹಿಮಾಲಯಕ್ಕೆ ಹೋಗಲಿ, ಅನಾನಸ್ ಸಾಕು, ಲಸಿಕೆ ಬೇಕು...ಮುಂತಾದ ಘೋಷಣೆಗಳನ್ನು ಕೂಗುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. 

ಲಸಿಕೆ ನೀಡುವುದನ್ನು ನಿಲ್ಲಿಸಿರುವುದನ್ನು ವಿರೋಧಿಸಿ ನಗರದ ಸುಮಾರು 12 ಕಡೆ ಸೇರಿದಂತೆ ಜಿಲ್ಲಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಘಟಕಗಳ ನೇತೃತ್ವದಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕೊರೋನ ಸೋಂಕಿನಿಂದ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಇದು ಕೊಲೆಗಡುಕ ಸರ್ಕಾರ. ಈಗ ಮುಂದುವರಿದ ಭಾಗವಾಗಿ ಇಂದಿನಿಂದ ಲಸಿಕೆ ಕೊಡುವುದನ್ನು ನಿಲ್ಲಿಸಿ ಜನರ ಉಸಿರು ನಿಲ್ಲಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಎಲ್ಲ ಜನರಿಗೂ ಉಚಿತ ಲಸಿಕೆ ನೀಡಬೇಕೆಂದು ನ್ಯಾಯಾಲಯವೇ ಹೇಳಬೇಕಾದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದುಕೊಂಡಿದ್ದು, ಲಸಿಕೆ ಉತ್ಪಾದನೆಯಲ್ಲಿ, ಹಂಚಿಕೆಯಲ್ಲಿ, ಹೊರದೇಶಕ್ಕೆ ಕಳಿಸುವಲ್ಲಿ ಭಾರೀ ಭ್ರಷ್ಟಾಚಾರವಾಗಿದೆ. ರಾಜ್ಯ ಸರ್ಕಾರ ಕೂಡ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಲಸಿಕೆ ವಿಷಯದಲ್ಲಿ ಖಾಸಗಿ ಕಂಪನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿರುವುದೇ ಇದಕ್ಕೆ ಸಾಕ್ಷಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಏಕೆ ಲಸಿಕೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಲಸಿಕೆಯ ಕೊರತೆಯೇ ಇಲ್ಲ ಎಂದು ಹೇಳಿ ಈಗ ಜನರನ್ನು ಲಸಿಕೆ ಪಡೆಯಲು ಪರದಾಡುವಂತೆ ಮಾಡಿದ್ದಾರೆ ಎಂದು ದೂರಿದರು.

ಕೂಡಲೇ ಲಸಿಕೆ ಹಾಕುವುದನ್ನು ಮುಂದುವರಿಸಬೇಕು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜಾಗೃತವಾಗಬೇಕು. 18 ವರ್ಷದ ಮೇಲ್ಪಟ್ಟವರಿಗೆ ಮತ್ತು ಎರಡನೇ ಬಾರಿ ಲಸಿಕೆ ಹಾಕಿಸುವವರಿಗೆ ತಕ್ಷಣವೇ ಲಸಿಕೆ ನೀಡಬೇಕು. ಮೂರನೇ ಅಲೆ ಭಯದಲ್ಲಿರುವಾಗ ಮಕ್ಕಳಿಗೆ ಲಸಿಕೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸದ ಅವರು, ಲಸಿಕೆ ವಿಚಾರದಲ್ಲಿ ಸರ್ಕಾರ ಏನಾದರೂ ಜೀವದ ಜೊತೆ ಆಟವಾಡಿದರೆ ಕಾಂಗ್ರೆಸ್ ಹೋರಾಟವನ್ನು ಆರಂಭಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಲಸಿಕೆಗೆ ಜಿಲ್ಲಾದ್ಯಂತ ಹಾಹಾಕಾರ ಎದ್ದಿದೆ. ಕಿಲೋ ಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ದಿನಕ್ಕೆ ಒಂದು ಕೋಟಿ ಲಸಿಕೆ ನೀಡುತ್ತೇವೆ ಎಂದ ಸರ್ಕಾರ ಅದನ್ನು ಮರೆತಿದೆ. ರಾಜ್ಯದ ಬಿಜೆಪಿ ನಾಯಕರು ಮೋದಿಯನ್ನು ಹೊಗಳುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೊರದೇಶಕ್ಕೆ ಕಳಿಸಲು ಲಸಿಕೆ ಇದೆ. ಭಾರತೀಯರಿಗೆ ಲಸಿಕೆ ಇಲ್ಲವೇ? ಎಂದು ಹರಿಹಾಯ್ದ ಅವರು, ಪ್ರಧಾನಿ ಮೋದಿ ಹಿಮಾಲಯಕ್ಕೆ ಹೋಗುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.

ಈ ಸಂದರ್ಭ ಪ್ರಮುಖರಾದ ಎಲ್. ರಾಮೇಗೌಡ, ಎಸ್.ಪಿ. ಶೇಷಾದ್ರಿ, ಎನ್. ಉಮಾಪತಿ, ಸೈಯದ್ ವಾಹಿದ್ ಅಡ್ಡು, ಇಕ್ಕೇರಿ ರಮೇಶ್, ಚಂದ್ರಶೇಖರ್, ಚಂದನ್, ರವಿಕುಮಾರ್, ಜಗದೀಶ್ ಮಾತನವರ್, ಮೊಹಮ್ಮದ್ ಆರೀಫ್, ಎನ್.ಡಿ. ಪ್ರವೀಣ್, ಸೌಗಂಧಿಕಾ, ನಾಜೀಮಾ, ತಬಸ್ಸುಮ್, ಸ್ಟೆಲ್ಲಾ ಮಾರ್ಟಿನ್, ಪ್ರಮೋದ್, ಪ್ರೇಮಾ ಮೊದಲಾವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News