ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ: ಲಕ್ಷಾಂತರ ರೂ. ಮೌಲ್ಯದ ಗಾಂಜಾ ಜಪ್ತಿ, ಆರೋಪಿ ಬಂಧನ

Update: 2021-06-29 15:02 GMT

ಶಿವಮೊಗ್ಗ, ಜೂ.29: ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದವನನ್ನು ಬಂಧಿಸಿದ್ದಾರೆ. ತಪಾಸಣೆ ವೇಳೆ ಆತನ ಕಾರಿನ ತುಂಬಾ ಗಾಂಜಾ ಅಡಗಿಸಿಟ್ಟಿರುವುದು ಬಯಲಿಗೆ ಬಂದಿದೆ.

ತರೀಕೆರೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಕಾರನ್ನು ಕಾರೇಹಳ್ಳಿ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಣೆ ನಡೆಸಿದಾಗ ಗಾಂಜಾ ಇರುವುದು ಬೆಳೆಕಿಗೆ ಬಂದಿದೆ. ಕಾರು ಚಾಲಕ ಮುರುಗ (32) ಎಂಬಾತನನ್ನು ಬಂಧಿಸಲಾಗಿದೆ. ಈತ ಭದ್ರಾವತಿಯ ಸಂಕ್ಲಿಪುರದವನು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾರುತಿ ಓಮ್ನಿ ಕಾರಿನ ಬಾಗಿಲು, ಢಿಕ್ಕಿ ಬಾಗಿಲು ತೆಗೆದು ತಪಾಸಣೆ ನಡೆಸಲಾಯಿತು. ಆದರೆ ಎಲ್ಲಿಯೂ ಗಾಂಜಾ ಪತ್ತೆಯಾಗಲಿಲ್ಲ. ಬಳಿಕ ಕಾರಿನ ಪೆಟ್ರೋಲ್ ಟ್ಯಾಂಕ್, ಹಿಂಬದಿಯ ಡೋರ್ ನಡುವೆ, ಹಿಂಭಾಗದ ಬಂಪರ್ ಒಳಭಾಗ, ಸ್ಲೈಡಿಂಗ್ ಡೋರ್ ಒಳಗೆ ಗಾಂಜಾ ಪ್ಯಾಕೆಟ್ ಗಳನ್ನು ಇರಿಸಿದ್ದು ಪತ್ತೆಯಾಗಿದೆ.

ಲಕ್ಷಾಂತರ ರೂ. ಮೌಲ್ಯದ ಗಾಂಜಾ: ಮುರುಗ ಚಲಾಯಿಸುತ್ತಿದ್ದ ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ. ಒಟ್ಟು 48 ಕೆಜಿ 656 ಗ್ರಾಂ ತೂಕದ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 5.83 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇನ್ನು, ಮುರುಗನ ಬಳಿ ಇದ್ದ ಮೊಬೈಲ್, ಕೃತ್ಯಕ್ಕೆ ಬಳಕೆ ಮಾಡಿಕೊಂಡ ಓಮ್ನಿ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಈತನ ವಿರುದ್ಧ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಶಿವಮೊಗ್ಗ ಪೊಲೀಸ್ ವಿಶೇಷ ಟೀಂ

ಗಾಂಜಾ ಸಾಗಾಟಗಾರರಿಗೆ ಬಿಸಿ ಮುಟ್ಟಿಸಲು ವಿಶೇಷ ತಂಡ ರಚಿಸಲಾಗಿತ್ತು. ಭದ್ರಾವತಿಯ ಹೆಚ್ಚುವರಿ ರಕ್ಷಣಾಧಿಕಾರಿ, ಶಿವಮೊಗ್ಗ ಡಿವೈಎಸ್ಪಿ, ಕುಂಸಿ ಠಾಣೆ ಇನ್ಸ್ ಪೆಕ್ಟರ್ ನೇತೃತ್ವದ ವಿಶೇಷ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News