ಚಾಮರಾಜನಗರ ದುರಂತ: ಕುಟುಂಬಸ್ಥರಿಗೆ ಪರಿಹಾರ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎಸ್‍ಡಿಪಿಐ ಆಗ್ರಹ

Update: 2021-06-29 17:12 GMT

ಬೆಂಗಳೂರು/ಮೈಸೂರು, ಜೂ.29: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರ್ಘಟನೆಯಲ್ಲಿ ಸಾವಿಗೀಡಾಗಿದವರ ಕುಟುಂಬಸ್ಥರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸಂತ್ರಸ್ತ ಕುಟುಂಬಸ್ಥರಿಗೆ 50 ಲಕ್ಷ ರೂ.ಪರಿಹಾರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ಇಂದು ಎಸ್‍ಡಿಪಿಐ ಚಾಮರಾಜನಗರ ಜಿಲ್ಲಾ ಸಮಿತಿಯ ವತಿಯಿಂದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ಭೇಟಿ ನೀಡಿ ಪ್ರಾದೇಶಿಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮದ್ ಮಾತನಾಡಿ, ಘಟನೆಯಲ್ಲಿ ಸಾವಿಗೀಡಾಗಿದವರ ಕುಟುಂಬಸ್ಥರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಪ್ರತಿ ಕುಟುಂಬ ಒಂದಕ್ಕೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಈ ಘಟನೆಗೆ ಚಾಮರಾಜನಗರ ಜಿಲ್ಲಾ ಅಧಿಕಾರಿಗಳು ಸೇರಿದಂತೆ ಕಾರಣಕಾರ್ತರಾದ ಇನ್ನಿತರ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ವೇಣುಗೋಪಾಲ್ ಗೌಡರವರು ನೀಡಿದ ವರದಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲದ ಕಾರಣ ಇಲ್ಲಿಯವರೆಗೂ ಅಧಿಕಾರಿಗಳ ವಿರುದ್ಧ ಕ್ರಮ ಆಗಿಲ್ಲ. ಅಲ್ಲದೇ ಘಟನೆಯಲ್ಲಿ ಸಾವಿಗೀಡಾದ ಎಲ್ಲ 37 ಮಂದಿಯ ಕುಟುಂಬಸ್ಥರಿಗೆ ಪ್ರಾಥಮಿಕ ಪರಿಹಾರದ ಮೊತ್ತ ಸಹ ನೀಡಿಲ್ಲದಿರುವುದು ಸರಕಾರದ ಜನ ವಿರೋಧಿ ನೀತಿಯ ಮುಂದುವರಿದ ಭಾಗವಾಗಿದೆ ಎಂದು ಅವರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News