ವಾಹನ ತೆರಿಗೆ ಪಾವತಿ ಅವಧಿ ಜುಲೈ 15 ರವರೆಗೆ ವಿಸ್ತರಿಸಿದ ರಾಜ್ಯ ಸರಕಾರ

Update: 2021-06-29 17:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.29: ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ಕಾಯ್ದೆ 1957 ರ ಕಲಂ 4(1)ರ ನಿಯಮಗಳನ್ನು ಸಡಿಲಗೊಳಿಸಿ ಈ ಕೆಳಕಂಡಂತೆ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ಅವಧಿಯನ್ನು ಜುಲೈ 15 ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ನೊಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೊಂದಣಿಯನ್ನು ಹೊರತುಪಡಿಸಿ) ಎ.15 ಹಾಗೂ ಮೇ 15ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆಯನ್ನು, ಕ್ರಮವಾಗಿ ಮೇ 31 ಹಾಗೂ ಜೂ.30ರವರೆಗೆ ದಂಡ ರಹಿತವಾಗಿ ಪಾವತಿಸಲು ವಿಸ್ತರಿಸಿದ್ದ ಅವಧಿಯನ್ನು ಜು.15ರ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಎಲ್ಲ ನೊಂದಾಯಿತ ಸರಕು ಸಾಗಾಣಿಕೆ ವಾಹನಗಳಿಗೆ( ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಸಂಬಂಧಿಸಿದಂತೆ ಮೇ 15 ಮತ್ತು ಜೂ.15ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ಜೂ.30ರ ವರೆಗೆ ವಿಸ್ತರಿಸಿದ ಅವಧಿಯನ್ನು ಜು.15ರವರೆಗೆ ದಂಡ ರಹಿತವಾಗಿ ಪಾವತಿಸಲು ಅವಧಿಯನ್ನು ವಿಸ್ತರಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಲಕ್ಷ್ಮಣ  ಸವದಿ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News