ಸಂಕಷ್ಟದ ಸಂದರ್ಭದಲ್ಲಿ ನ್ಯಾಯಾಂಗದ ಮಧ್ಯ ಪ್ರವೇಶ ಅನಿವಾರ್ಯ: ನಿವೃತ್ತ ನ್ಯಾ. ನಾಗಮೋಹನದಾಸ್
ಬೆಂಗಳೂರು, ಜೂ.29: ದೇಶದಲ್ಲಿ ಜನಸಾಮಾನ್ಯರಿಗೆ ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ನ್ಯಾಯ ಸಿಗದಿದ್ದಾಗ ನ್ಯಾಯಾಂಗದ ಕದ ತಟ್ಟುತ್ತಾರೆ. ಆಗ ನ್ಯಾಯಾಲಯ ಅನಿವಾರ್ಯವಾಗಿ ಮಧ್ಯ ಪ್ರವೇಶ ಮಾಡುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಹೇಳಿದ್ದಾರೆ.
ಈ ಬಗ್ಗೆ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕಳೆದ ಬಾರಿ ಕೊರೋನ ಸಂದರ್ಭದಲ್ಲಿ ಕೇಂದ್ರ ಸರಕಾರ ಯಾವುದೇ ಪೂರ್ವ ಸೂಚನೆ ಇಲ್ಲದೆ ಲಾಕ್‍ಡೌನ್ ಘೋಷಣೆ ಮಾಡಿದಾಗ ಲಕ್ಷಾಂತರ ಅಸಂಘಟಿತ ಕಾರ್ಮಿಕರು ತೊಂದರೆಗೀಡಾದರು. ಈ ವೇಳೆಯಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಕೇಂದ್ರ ಸರಕಾರಕ್ಕೆ ಹಲವು ಸೂಚನೆಗಳನ್ನು ನೀಡಿ, ಸಾಕಷ್ಟು ಜನಕ್ಕೆ ಪ್ಯಾಕೇಜ್‍ಗಳು ಘೋಷಣೆ ಆಗುವಂತೆ ಮಾಡಿದರು ಎಂದು ಹೇಳಿದರು.
ತಜ್ಞರ ವರದಿ ನಿರ್ಲಕ್ಷ್ಯ, ಕೊರೋನ ಎರಡನೆ ಅಲೆ ಅಸಮರ್ಪಕ ನಿರ್ವಹಣೆ, ಸಾವಿರಾರು ಜನರ ಸಾವು-ನೋವು, ಆಕ್ಸಿಜನ್ ಕೊರತೆ, ಬ್ಲಾಕ್‍ನಲ್ಲಿ ಔಷಧಿಗಳ ಮಾರಾಟ, ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಿ ಸರಕಾರಕ್ಕೆ ಚಾಟಿ ಬೀಸಿದ ಪರಿಣಾಮ ಹಲವು ಜನರಿಗೆ ಅನುಕೂಲವಾಯಿತು ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದಾಗ ನ್ಯಾಯಾಲಯ ಸರಕಾರಕ್ಕೆ ಹಲವು ಸೂಚನೆಗಳನ್ನು ನೀಡಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತದೆ. ಕೋರ್ಟ್‍ಗಳು ಮಧ್ಯಪ್ರವೇಶಿಸದಿದ್ದರೆ ಜನ ಕಾನೂನನ್ನು ಕೈಗೆತ್ತಿಗೊಳ್ಳುತ್ತಾರೆ, ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಹೇಳಿದರು.